ADVERTISEMENT

Jharkhand Elections: ಮೊದಲ ಪಟ್ಟಿ ನಂತರ ವಾಕ್ಸಮರ, ರಾಜೀನಾಮೆ ಪ್ರಹಸನ

ಪಿಟಿಐ
Published 23 ಅಕ್ಟೋಬರ್ 2024, 16:05 IST
Last Updated 23 ಅಕ್ಟೋಬರ್ 2024, 16:05 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ರಾಂಚಿ: ಜಾರ್ಖಂಡ್‌ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯು ವಾಕ್ಸಮರ ಮತ್ತು ರಾಜೀನಾಮೆ ಪ್ರಹಸನಗಳಿಗೂ ಕಾರಣವಾಗಿದೆ. 

ADVERTISEMENT

ಆಡಳಿತಾರೂಢ ಜೆಎಂಎಂ ಮತ್ತು ಬಿಜೆಪಿ ಎರಡೂ ಪಕ್ಷಗಳು ಸ್ವಜನಪಕ್ಷಪಾತದ ಬಗ್ಗೆ ಆರೋಪ– ಪ್ರತ್ಯಾರೋಪದಲ್ಲಿ ತೊಡಗಿವೆ. ಎರಡೂ ಪಕ್ಷಗಳಲ್ಲಿ ಕಾರ್ಯಕರ್ತರ ಹಿತಾಸಕ್ತಿ ಬದಿಗೊತ್ತಿ ಪ್ರಬಲ ರಾಜಕೀಯ ಕುಟುಂಬಗಳ ಸದಸ್ಯರಿಗೆ ಮಣೆಹಾಕಲಾಗಿದೆ.

ಗೆಲ್ಲುವ ಸಾಮರ್ಥ್ಯವನ್ನೇ ಮಾನದಂಡವಾಗಿರಿಸಿಕೊಂಡು ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಜೆಎಂಎಂ ತೊರೆದು ಬಂದಿರುವ ಮಾಜಿ ಸಿ.ಎಂ ಚಂಪೈ ಸೊರೇನ್ ಮತ್ತು ಅವರ ಮಗ ಬಾಬುಲಾ ಸೊರೇನ್‌ ಅವರಿಗೆ ಟಿಕೆಟ್ ನೀಡಿದೆ.

ಜೆಎಂಎಂ ತೊರೆದುಬಂದ ಮತ್ತೊಬ್ಬ ನಾಯಕಿ ಸೀತಾ ಸೊರೇನ್‌ ಅವರನ್ನು ಬಿಜೆಪಿ ಜಮ್ತಾರ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಸೀತಾ ಅವರು ಜೆಎಂಎಂ ಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್‌ ಅವರ ಸೊಸೆ. ಹೇಮಂತ್‌ ಸೊರೇನ್‌ ಅವರ ಪತ್ನಿ ಕಲ್ಪನಾ ಅವರನ್ನು ಸಕ್ರಿಯ ರಾಜಕಾರಣಕ್ಕೆ ತರುವ ಜೆಎಂಎಂ ನಿರ್ಧಾರ ವಿರೋಧಿಸಿ ಸೀತಾ ಮತ್ತು ಶಿಬು ಸೊರೇನ್‌ ಅವರ ಹಿರಿಯಣ್ಣನ ಪತ್ನಿ ದುರ್ಗಾ ಅವರು ಪಕ್ಷ ತೊರೆದಿದ್ದಾರೆ. 

ಜಾರ್ಖಂಡ್‌ನ ಇತರ ಇಬ್ಬರು ಮಾಜಿ ಸಿ.ಎಂಗಳ ಪತ್ನಿಯರಿಗೂ ಬಿಜೆಪಿ ಟಿಕೆಟ್‌ ನೀಡಿದೆ. ಜಗನ್ನಾಥಪುರದಿಂದ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ ಮತ್ತು ಪೊಟ್ಕಾದಿಂದ ಅರ್ಜುನ್ ಮುಂಡಾ ಅವರ ಪತ್ನಿ ಮೀರಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಬಿಜೆಪಿಯ ಮಾಜಿ ಸಿ.ಎಂ ಮತ್ತು ಸದ್ಯ ಒಡಿಶಾ ರಾಜ್ಯಪಾಲರಾಗಿರುವ ರಘುವರ್ ದಾಸ್ ಅವರ ಸೊಸೆ ಪೂರ್ಣಿಮಾ ದಾಸ್ ಸಾಹು ಕೂಡ ಜೆಮ್‌ಶೆಡ್‌ಪುರ ಕ್ಷೇತ್ರದಿಂದ ಕಣಕ್ಕಿಳಿಯುವ ತಯಾರಿಯಲ್ಲಿದ್ದಾರೆ.

ಜಾರ್ಖಂಡ್‌ನಲ್ಲಿ ಅಭ್ಯರ್ಥಿಗಳ ಆಯ್ಕೆಯು, ಇತ್ತೀಚೆಗಷ್ಟೇ ಮುಗಿದ ಹರಿಯಾಣ ಚುನಾವಣೆಯಲ್ಲಿ ಪ್ರಬಲ ರಾಜಕೀಯ ಕುಟುಂಬಗಳ ಸದಸ್ಯರಿಗೆ ಮಣೆ ಹಾಕಿದ ಬಿಜೆಪಿಯ ನಿರ್ಧಾರದಿಂದ ಪ್ರಭಾವಿತವಾಗಿರುವಂತಿದೆ.

‘ಟಿಕೆಟ್ ಆಯ್ಕೆಯು ಪಕ್ಷದ ಹಲವು ಕಾರ್ಯಕರ್ತರನ್ನು ನಿರಾಸೆಗೊಳಿಸಿದೆ. ಲೋಕಸಭೆ ಚುನಾವಣೆಯಲ್ಲಿ ಸೋತವರು ಮತ್ತು ರಾಜಕಾರಣಿಗಳ ಸಂಬಂಧಿಗಳಿಗೆ ಮಣೆ ಹಾಕಲಾಗಿದೆ’ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಸಂದೀಪ್ ವರ್ಮಾ ಹೇಳಿದ್ದಾರೆ. ಮಾಜಿ ಸಚಿವ ಮತ್ತು ರಾಂಚಿಯಿಂದ 6 ಬಾರಿ ಶಾಸಕರಾಗಿರುವ ಸಿ.ಪಿ. ಸಿಂಗ್ ವಿರುದ್ಧ ವರ್ಮಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಯಾರಿಯಲ್ಲಿದ್ದಾರೆ.

‘ಪಕ್ಷದ ನಾಯಕರು ಸ್ವಜನಪಕ್ಷಪಾತವನ್ನು ಉತ್ತೇಜಿಸುತ್ತಿದ್ದಾರೆ’ ಎಂದು ಆರೋಪಿಸಿ, ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಸಚಿವ ಲೂಯಿಸ್ ಮರಾಂಡಿ ಕೂಡ ಈ ವಾರದ ಆರಂಭದಲ್ಲಿ ಪಕ್ಷ ತೊರೆದು ಜೆಎಂಎಂ ಸೇರಿದ್ದಾರೆ. ಇವರು 2014ರಲ್ಲಿ ಹೇಮಂತ್ ಸೊರೇನ್ ವಿರುದ್ಧ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಮತ್ತೊಂದೆಡೆ, ಸಿ.ಎಂ ಹೇಮಂತ್ ಸೊರೇನ್ ಅವರ ಕುಟುಂಬಕ್ಕೆ ಜೆಎಂಎಂ ಮಣೆ ಹಾಕಿದೆ ಎಂದು ಬಿಜೆಪಿ ಆರೋಪಿಸಿದೆ. ಜೆಎಂಎಂ ಪಕ್ಷವು 35 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹೇಮಂತ್ ಸೊರೇನ್, ಅವರ ಪತ್ನಿ ಕಲ್ಪನಾ ಮತ್ತು ಶಿದು ಸೊರೇನ್ ಅವರ ಕಿರಿಯ ಪುತ್ರ ಬಸನ್ ಸೊರೇನ್ ಅವರಿಗೆ ಟಿಕೆಟ್‌ ಘೋಷಿಸಿದೆ.  

ಜೆಎಂಎಂ ಪಟ್ಟಿ ಬಗ್ಗೆ ಬುಧವಾರ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಮತ್ತು ಜಾರ್ಖಂಡ್‌ನ ಬಿಜೆಪಿ ಉಸ್ತುವಾರಿ ಹಿಮಂತ್‌ ಬಿಸ್ವ ‘ಜೆಎಂಎಂಗೆ ಅಭ್ಯರ್ಥಿಗಳ ಕೊರತೆಯಿದೆ. ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಸಿಗುತ್ತಿಲ್ಲ. ಅವರು ಬಯಸಿದರೆ ನಾನು ಅವರಿಗೆ ಕೆಲವು ಅಭ್ಯರ್ಥಿಗಳನ್ನು ಸೂಚಿಸಬಹುದು’ ಎಂದು ವ್ಯಂಗ್ಯವಾಡಿದ್ದಾರೆ.

ಜಾರ್ಖಂಡ್ ವಿಧಾನಸಭೆಯ 81 ಸ್ಥಾನಗಳಿಗೆ ನವೆಂಬರ್‌ನಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.