ನವದೆಹಲಿ: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮೊದಲ ಹಂತ, ವಯನಾಡ್ ಲೋಕಸಭಾ ಹಾಗೂ 33 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರ ಸೋಮವಾರ ಕೊನೆಗೊಂಡಿದೆ.
ಜಾರ್ಖಂಡ್ ವಿಧಾನಸಭೆಯ 81 ಕ್ಷೇತ್ರಗಳ ಪೈಕಿ 43 ಸ್ಥಾನಗಳಿಗೆ ನವೆಂಬರ್ 13 ರಂದು ಮತದಾನ ನಡೆಯಲಿದೆ. ಉಳಿದ 38 ಸ್ಥಾನಗಳಿಗೆ ಎರಡನೇ ಹಂತದ ಮತದಾನ ನವೆಂಬರ್ 20ರಂದು ನಡೆಯಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ‘ಇಂಡಿಯಾ’ ಮೈತ್ರಿಕೂಟದ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ.
2000ರ ನವೆಂಬರ್‌ನಲ್ಲಿ ಬಿಹಾರದಿಂದ ಬೇರ್ಪಟ್ಟು ಜಾರ್ಖಂಡ್ ಹೊಸ ರಾಜ್ಯವಾಗಿ ರೂಪುಗೊಂಡಿತು. ಆ ನಂತರ ನಡೆದ ಚುನಾವಣೆಗಳಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ರಾಜ್ಯದಲ್ಲಿ ಮೈತ್ರಿ ಸರ್ಕಾರಗಳೇ ಆಡಳಿತ ನಡೆಸಿವೆ.
ರಾಜ್ಯದ 24 ಜಿಲ್ಲೆಗಳಲ್ಲಿನ 2.6 ಕೋಟಿ ಮತದಾರರಲ್ಲಿ ಆದಿವಾಸಿಗಳ ಸಂಖ್ಯೆ ಶೇ 26ರಷ್ಟು. ಪರಿಶಿಷ್ಟ ಪಂಗಡದ (ಎಸ್‌ಟಿ) 28 ಮೀಸಲು ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ಜೆಎಂಎಂ 25ರಲ್ಲಿ ಗೆದ್ದರೆ, ಬಿಜೆಪಿ ಕೇವಲ 2 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಮೊದಲ ಹಂತದಲ್ಲಿ 20 ಎಸ್‌ಟಿ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ, ಆದಿವಾಸಿ ಮತದಾರರನ್ನು ಸೆಳೆಯಲು ಎರಡೂ ಮೈತ್ರಿಕೂಟಗಳು ಕಸರತ್ತು ನಡೆಸಿವೆ.
ರಾಜ್ಯದಲ್ಲಿ ಮುಸ್ಲಿಮರು ಶೇ 20ರಷ್ಟು ಇದ್ದಾರೆ. ಕಳೆದ ಚುನಾವಣೆಯಲ್ಲಿ ಆದಿವಾಸಿಗಳು ಹಾಗೂ ಮುಸ್ಲಿಮರು ಜೆಎಂಎಂ ಮೈತ್ರಿಕೂಟದ ಬೆನ್ನಿಗೆ ನಿಂತಿದ್ದರು. ಹೀಗಾಗಿ, ಮೈತ್ರಿಕೂಟ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಸಲ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಆದಿವಾಸಿಗಳ ಓಲೈಸಲು ಹಲವು ಘೋಷಣೆಗಳನ್ನು ಮಾಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ, ಬಾಂಗ್ಲಾ ನುಸುಳುಕೋರರ ಗಡಿಪಾರು ಮತ್ತಿತರ ಉಪಕ್ರಮಗಳನ್ನು ಕೈಗೊಳ್ಳುವುದಾಗಿ ಬಿಜೆಪಿ ನಾಯಕರು ಘೋಷಿಸಿದ್ದಾರೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಬಂಧನ ವಿಷಯವನ್ನು ಮುಂದಿಟ್ಟುಕೊಂಡು ಆದಿವಾಸಿಗಳ ಅನುಕಂಪ ಗಿಟ್ಟಿಸಲು ಜೆಎಂಎಂ ಮೈತ್ರಿಕೂಟ ಪ್ರಯತ್ನ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.