ADVERTISEMENT

ನಿಷೇಧಾಜ್ಞೆ ಉಲ್ಲಂಘನೆ: ಕೇಂದ್ರ ಸಚಿವ ಸೇರಿ ಬಿಜೆಪಿಯ 41 ಮಂದಿ ವಿರುದ್ಧ ಎಫ್‌ಐಆರ್

ಪಿಟಿಐ
Published 13 ಏಪ್ರಿಲ್ 2023, 11:22 IST
Last Updated 13 ಏಪ್ರಿಲ್ 2023, 11:22 IST
ಅರ್ಜುನ್‌ ಮುಂಡಾ
ಅರ್ಜುನ್‌ ಮುಂಡಾ   

ರಾಂಚಿ, ಜಾರ್ಖಂಡ್‌: ‘ನಿಷೇಧಾಜ್ಞೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಸಚಿವ ಅರ್ಜುನ್‌ ಮುಂಡಾ, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿಗಳಾದ ರಘುಬರ್‌ ದಾಸ್‌ ಮತ್ತು ಬಾಬುಲಾಲ್‌ ಮರಾಂಡಿ ಸೇರಿದಂತೆ ಬಿಜೆಪಿಯ 41 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದರು.

ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ರಾಂಚಿಯಲ್ಲಿ ಮಂಗಳವಾರ ಸಚಿವಾಲಯ ಘೇರಾವ್‌ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದಾಗಿ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಅದನ್ನು ಲೆಕ್ಕಿಸದೇ ಸಚಿವಾಲಯಕ್ಕೆ ನುಗ್ಗಲು ಕಾರ್ಯಕರ್ತರು ಯತ್ನಿಸಿದ್ದರು. ಪ್ರತಿಭಟನಕಾರರನ್ನು ಚದುರಿಸಲು ಅಶ್ರುವಾಯು, ಜಲಫಿರಂಗಿ ಹಾಗೂ ಲಾಠಿ ಚಾರ್ಜ್‌ ಪ್ರಯೋಗಿಸಲಾಗಿತ್ತು.

ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಸರ್ಕಾರ ಹೇಳಿತ್ತು. ಈ ಹಿನ್ನೆಲೆಯಲ್ಲಿ ಸದಸ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ADVERTISEMENT

ಪ್ರಕರಣ ದಾಖಲಾಗಿರುವ ಕುರಿತು ಮಾಹಿತಿ ನೀಡಿದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ (ಕಾನೂನು ಮತ್ತು ಸುವ್ಯವಸ್ಥೆ) ಆರ್‌.ಎನ್. ಅಲೋಕ್‌ ಅವರು, ‘ನಿಷೇಧಾಜ್ಞೆ ವೇಳೆ, ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಅವರು ನೀಡಿದ ದೂರಿನ ಆಧಾರದಲ್ಲಿ ಧುರ್ವಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದರು.

ಈ ಕುರಿತು ಪ್ರತಿಕ್ರಿಯಿಸಿರುವ ಅರ್ಜುನ್ ಮುಂಡಾ ಅವರು, ‘ಇದೊಂದು ರಾಜಕೀಯ ಪಿತೂರಿ. ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಮಂಗಳವಾರ ನಡೆಸಿದ ಲಾಠಿ ಚಾರ್ಜ್‌ ಅನ್ನು ವಿರೋಧಿಸಿ, ಬುಧವಾರದಂದು ‘ಕರಾಳ ದಿನ’ ಆಚರಿಸಲಾಗಿದೆ. ಪೊಲೀಸ್‌ ದೌರ್ಜನ್ಯವನ್ನು ಪ್ರತಿಭಟಿಸಲು ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಅವರ ಅಣಕು ಶವಯಾತ್ರೆ ನಡೆಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.