ನವದೆಹಲಿ: ಭಯೋತ್ಪಾದನೆ ನಿಗ್ರಹ ವಿಚಾರವಾಗಿ ಹೊಸ ಕೋರ್ಸ್ ಆರಂಭಿಸಲು ದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಚಿಂತನೆ ನಡೆಸಿದೆ. ಜೆಎನ್‌ಯು ಕಾರ್ಯನಿರ್ವಾಹಕ ಮಂಡಳಿಯ ಸಭೆ ಗುರುವಾರ ನಡೆಯಲಿದ್ದು, ಹೊಸ ಕೋರ್ಸ್‌ಗೆ ಅನುಮೋದನೆ ನೀಡುವ ಬಗ್ಗೆ ಚರ್ಚೆಯಾಗಲಿದೆ.
ಆದರೆ, ಹೊಸ ಕೋರ್ಸ್ ಆರಂಭಿಸುವುದಕ್ಕೆ ಕೆಲವು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಪ್ರಸ್ತಾವಿತ ಕೋರ್ಸ್ ಜಿಹಾದಿ ಭಯೋತ್ಪಾದನೆಯನ್ನು ಮಾತ್ರ ಮೂಲಭೂತವಾದಿ ಧಾರ್ಮಿಕ ಭಯೋತ್ಪಾದನೆ ಎಂದು ವಿವರಿಸುತ್ತದೆ ಎಂದು ಅವರು ಆಕ್ಷೇಪಿಸಿದ್ದಾರೆ.
‘ಭಯೋತ್ಪಾದನೆ ನಿಗ್ರಹ, ಅಸಮತೋಲಿತ ಸಂಘರ್ಷ ಮತ್ತು ಪ್ರಮುಖ ಶಕ್ತಿಗಳ ನಡುವಣ ಕಾರ್ಯತಂತ್ರಗಳು’ ಎಂಬ ಶೀರ್ಷಿಕೆಯುಳ್ಳ ಹೊಸ ಕೋರ್ಸ್‌ನಲ್ಲಿ, ಸೋವಿಯತ್ ಒಕ್ಕೂಟ ಮತ್ತು ಚೀನಾದ ಕಮ್ಯುನಿಸ್ಟ್ ಆಡಳಿತಗಳು ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿವೆ. ಇದು ಮೂಲಭೂತವಾದಿ ಇಸ್ಲಾಮಿಕ್ ಆಡಳಿತಗಳ ಮೇಲೆ ಪರಿಣಾಮ ಬೀರಿದೆ ಎಂದು ಪ್ರತಿಪಾದಿಸಲಾಗಿದೆ.
ಕೋರ್ಸ್‌ಗೆ ವಿಶ್ವ ವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಆಗಸ್ಟ್ ಆರಂಭದಲ್ಲಿ ಅನುಮೋದನೆ ನೀಡಿತ್ತು. ದ್ವಿ–ಪದವಿ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಿದ್ಧಪಡಿಸಲಾಗಿರುವ ಈ ಕೋರ್ಸ್ ಐಚ್ಛಿಕವಾಗಿದೆ.
‘ಸೆಪ್ಟೆಂಬರ್ 2ರಂದು ನಡೆಯಲಿರುವ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಹೊಸ ಕೋರ್ಸ್‌ಗೆ ಅನುಮೋದನೆ ನೀಡುವ ವಿಚಾರ ಚರ್ಚೆಗೆ ಬರಲಿದೆ. ಕೆಲವು ವರ್ಷಗಳ ಹಿಂದೆ ಇದೇ ಕೆಲಸ ಮಾಡಲು ವಿಶ್ವವಿದ್ಯಾಲಯ ಆಡಳಿತ ಮುಂದಾಗಿತ್ತು. ಆದರೆ ದೆಹಲಿಯ ಅಲ್ಪಸಂಖ್ಯಾತ ನಿಯೋಗ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಪ್ರಸ್ತಾವ ಹಿಂಪಡೆಯಲಾಗಿತ್ತು. ಅಂಥ ಕೋರ್ಸ್ ಅನ್ನು ಕಲಿಸಲು ಮುಂದಾಗಬಾರದು, ಹಿಂಪಡೆಯಬೇಕು. ಅದು ಸಮಸ್ಯಾತ್ಮಕವಾಗಿದೆ’ ಎಂದು ಜೆಎನ್‌ಯು ಉಪನ್ಯಾಸಕರ ಸಂಘದ ಕಾರ್ಯದರ್ಶಿ ಮೌಶ್ಮಿ ಬಸು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.