ಚೆನ್ನೈ: ವಿದ್ಯಾರ್ಥಿನಿಯರಕಾಲ್ಗೆಜ್ಜೆ ದನಿ ಹುಡುಗರ ಮನಸ್ಸನ್ನು ಗಲಿಬಿಲಿಗೊಳಿಸುತ್ತದೆ.ಕಾಲ್ಗೆಜ್ಜೆಯ ದನಿ ಕೇಳಿದಾಗ ಕಲಿಯುವ ಹುಡುಗರ ಗಮನ ಬೇರೆಡೆಗೆ ಹರಿಯುತ್ತದೆ ಎಂದು ತಮಿಳುನಾಡು ಶಾಲಾಶಿಕ್ಷಣ ಸಚಿವ ಕೆ.ಎ ಸೆಂಗೊಟ್ಟಿಯಾನ್ ಹೇಳಿದ್ದಾರೆ.
ಗೋಬಿಚೆಟ್ಟಿಪಾಳ್ಯಂ ವಿಧಾನಸಭಾ ಕ್ಷೇತ್ರದಲ್ಲಿರುವ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣೆ ಮಾಡಿದ ನಂತರ ಮಾತನಾಡಿದ ಸಚಿವರು, ಕಾಲ್ಗೆಜ್ಜೆ ಸದ್ದು ಹುಡುಗರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ ಎಂದಿದ್ದರು.
ಶಾಲಾ ಶಿಕ್ಷಣ ಇಲಾಖೆ ವಿದ್ಯಾರ್ಥಿನಿಯರು ಕಾಲ್ಗೆಜ್ಜೆ ಧರಿಸುವುದು ಮತ್ತು ಹೂ ಮುಡಿಯುವುದನ್ನು ನಿಷೇಧಿಸುತ್ತದೆ ಎಂಬ ಸುದ್ದಿ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ ಎಂದು ಸಚಿವರು ಉತ್ತರಿಸಿದ್ದಾರೆ.
ಇಷ್ಟು ಹೇಳಿದ ನಂತರ ತಮ್ಮ ಮಾತುಗಳನ್ನು ಮುಂದುವರಿಸಿದ ಸಚಿವರು, ವಿದ್ಯಾರ್ಥಿಗಳು ಶಾಲೆಗೆ ಬರುವಾಗ ಉಂಗುರ ಧರಿಸಿಕೊಂಡು ಬಂದು ಅದು ಕಳೆದುಹೋದರೆ, ಆ ಉಂಗುರ ಕದ್ದುಕೊಂಡ ವ್ಯಕ್ತಿ ಮಾನಸಿಕವಾಗಿ ನೋವು ಅನುಭವಿಸುತ್ತಾನೆ. ಹುಡುಗಿಯರು ಕಾಲ್ಗೆಜ್ಜೆ ಧರಿಸಿದರೆ ಅದರ ಸದ್ದು ಕೇಳಿ ಹುಡುಗರಿಗೆ ಕಲಿಕೆಯಲ್ಲಿ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿನಿಯರು ಹೂ ಮುಡಿಯುವುದಕ್ಕೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ ಎಂದಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.