ಜಮ್ಮು: ಜಮ್ಮುವಿನ ರಾಜಧಾನಿಯಲ್ಲಿರುವ ಅಮರನಾಥ ಯಾತ್ರಾತ್ರಿಗಳ ಮುಖ್ಯ ‘ಬೇಸ್ ಕ್ಯಾಂಪ್’ ದೊಡ್ಡ ಮಟ್ಟದಲ್ಲಿ ನವೀಕರಣಗೊಳ್ಳುತ್ತಿದ್ದು, ಜೂನ್ 20ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3,300 ಮೀಟರ್ ಎತ್ತರದಲ್ಲಿರುವ ದಕ್ಷಿಣ ಕಾಶ್ಮೀರದ ಗುಹಾ ದೇವಾಲಯಕ್ಕೆ ತೀರ್ಥಯಾತ್ರೆಯು ಜೂನ್ 29ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 19ಕ್ಕೆ ಮುಕ್ತಾಯವಾಗಲಿದೆ ಎಂದು ಅವರು ಹೇಳಿದ್ದಾರೆ.
ಅಮರನಾಥ ದೇಗುಲಕ್ಕೆ ತೆರಳುವ ಯಾತ್ರಾತ್ರಿಗಳಿಗೆ ಭಗವತಿ ನಗರದಲ್ಲಿರುವ ಯಾತ್ರಿ ನಿವಾಸವು ಮುಖ್ಯ ಬೇಸ್ ಕ್ಯಾಂಪ್ ಆಗಿದೆ.
ಜಮ್ಮು ವಿಭಾಗೀಯ ಆಯುಕ್ತ ರಮೇಶ್ ಕುಮಾರ ಮತ್ತು ಎಡಿಜಿಪಿ ಆನಂದ್ ಜೈನ್ ಅವರು ಶುಕ್ರವಾರ ಕ್ಯಾಂಪ್‌ಗೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದರು. ಜೂನ್ 20 ನವೀಕರಣ ಕೆಲಸ ಮುಕ್ತಾಯಗೊಳಿಸುವಂತೆ ಸೂಚಿಸಿದರು.
ಭದ್ರತಾ ಸಿದ್ಧತೆಯ ಬಗ್ಗೆ ಚರ್ಚಿಸಿದ ಆಯುಕ್ತರು, ನಿಗದಿತ ಸಮಯದಲ್ಲಿ ಎಲ್ಲ ಅಗತ್ಯ ತಯಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಮಾತಾ ವೈಷ್ಣೋದೇವಿ ದೇಗುಲ ಯಾತ್ರೆಗೆ ಒಂದು ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಮೂಲಕ 48 ಕಿ.ಮೀ. ದೂರದ ಸಾಂಪ್ರದಾಯಿಕ ಮಾರ್ಗ ಹಾಗೂ ಮಧ್ಯ ಕಾಶ್ಮೀರದ ಗಾಂದರಬಲ್ ಜಿಲ್ಲೆಯ ಮೂಲಕ 14 ಕಿ.ಮೀ. ಇರುವ ಸಮೀಪ ಮಾರ್ಗದ ಮೂಲಕ ಯಾತ್ರಾತ್ರಿಗಳು ತೆರಳಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.