ADVERTISEMENT

ಕಾಶ್ಮೀರ ಇನ್ನುಮುಂದೆ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶ

ಪಿಟಿಐ
Published 7 ಆಗಸ್ಟ್ 2019, 5:22 IST
Last Updated 7 ಆಗಸ್ಟ್ 2019, 5:22 IST
   

ನವದೆಹಲಿ: ಕಣಿವೆ ರಾಜ್ಯ ಕಾಶ್ಮೀರವನ್ನು ವಿಭಾಗಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ, ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಹೆಚ್ಚಳವಾಗಿದ್ದು, ಇವುಗಳ ಪೈಕಿ ವಿಸ್ತೀರ್ಣದ ವಿಚಾರದಲ್ಲಿ ಕಾಶ್ಮೀರ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶ ಎನಿಸಿಕೊಳ್ಳಲಿದೆ. ಇದರ ಬಳಿಕ ಲಡಾಕ್ ಇರಲಿದೆ.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಸೇರ್ಪಡೆಯಿಂದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9ಕ್ಕೆ ಏರಿಕೆಯಾಗಲಿದೆ. ದೆಹಲಿ, ಪುದುಚೇರಿ, ದಿಯು ಮತ್ತು ದಮನ್, ದಾದ್ರಾ ಮತ್ತು ನಗರ ಹವೇಲಿ, ಚಂಡಿಗಡ, ಲಕ್ಷದ್ವೀಪ ಹಾಗೂ ಅಂಡಮಾನ್–ನಿಕೋಬಾರ್ ದ್ವೀಪ ಸಮೂಹಗಳು ಸದ್ಯಕೇಂದ್ರಾಡಳಿತಕ್ಕೆ ಒಳಪಟ್ಟಿವೆ.

ದೆಹಲಿ ಹಾಗೂ ಪುದುಚೇರಿಯ ಜೊತೆಗೆ ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶವಾಗಿ ಜಮ್ಮು–ಕಾಶ್ಮೀರ ಸೇರ್ಪಡೆಯಾಗಲಿದೆ. ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಇರುತ್ತಾರೆ. ಕೇಂದ್ರಾಡಳಿತ ಪ್ರದೇಶಗಳಿಂದ ಸಂಸತ್ತಿಗೆ ಆಯ್ಕೆಯಾಗುವ ಸಂಸದರ ಸಂಖ್ಯೆ ಕಡಿಮೆ. ದೆಹಲಿಯ ಏಳು ಸಂಸದರು ಲೋಕಸಭೆಯಲ್ಲಿ ಪ್ರತಿನಿಧಿಸುತ್ತಾರೆ.

ADVERTISEMENT

ವಂಶಾಡಳಿತದಿಂದ ಮುಕ್ತಿ:ಲಡಾಕ್ ಸಂಸದ

ಕೇಂದ್ರ ಸರ್ಕಾರದ ಕ್ರಮವನ್ನು ಲಡಾಕ್ ಬಿಜೆಪಿ ಸಂಸದ ಜಮ್‌ಯಾಂಗ್ ಸೆರಿಂಗ್ ನಮ್‌ಗ್ಯಾಲ್ ಸ್ವಾಗತಿಸಿದ್ದಾರೆ. ಅಭಿವೃದ್ಧಿ ಹಾಗೂ ಗಡಿ ಭದ್ರತೆ ಹೆಚ್ಚಳದಲ್ಲಿ ಈಕ್ರಮ ಅನಿವಾರ್ಯ ಎಂದು ಅವರು ಹೇಳಿದ್ದಾರೆ.

ಎರಡು ಕುಟುಂಬಗಳ ಹಿಡಿತದಲ್ಲಿದ್ದ ಕಣಿವೆಗೆ ಮುಕ್ತಿ ಸಿಕ್ಕಿದೆ ಎಂದು ಮುಫ್ತಿ ಹಾಗೂ ಅಬ್ದುಲ್ಲಾ ಮನೆತನಗಳನ್ನು ಉಲ್ಲೇಖಿಸಿ ನಮ್‌ಗ್ಯಾಲ್ ಹೇಳಿಕೆ ನೀಡಿದ್ದಾರೆ.

ಕಾಶ್ಮೀರಿ ಕೇಂದ್ರಿತ ನಾಯಕರಿಂದ ತಾರತಮ್ಯಕ್ಕೆ ಒಳಗಾಗಿದ್ದ ಲಡಾಕ್‌ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ 1948ರಿಂದಲೂ ಬೇಡಿಕೆ ಇಡಲಾಗಿತ್ತು ಎಂದು ಅವರು ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.