ನವದೆಹಲಿ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿ.ವಿ.ಅರ್.ಸುಬ್ರಹ್ಮಣ್ಯಂ ಅವರನ್ನು ನೂತನ ವಾಣಿಜ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ದೇಶದ ಪ್ರಮುಖ ಗೂಢಚಾರ ಸಂಸ್ಥೆ ಆರ್‌ಎಡಬ್ಲ್ಯುನ (ರಾ) ಮುಖ್ಯಸ್ಥ ಸಮಂತ್ ಗೋಯೆಲ್ ಹಾಗೂ ಇಂಟೆಲಿಜೆನ್ಸ್ ಬ್ಯುರೋದ ಮುಖ್ಯಸ್ಥ ಅರವಿಂದ್ ಕುಮಾರ್ ಅವರ ಅಧಿಕಾರಾವಧಿಯನ್ನು ಒಂದು ವರ್ಷ ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಆಡಳಿತಾತ್ಮಕ ನಿರ್ಧಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿತು ಎಂದೂ ಸರ್ಕಾರ ತಿಳಿಸಿದೆ.
ಈಗ ವಾಣಿಜ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅನೂಪ್ ವಾಧ್ವಾನ್ ಅವರ ಅಧಿಕಾರಾವಧಿ ಜೂನ್ 30ಕ್ಕೆ ಅಂತ್ಯಗೊಳ್ಳುವುದು.
1987ರ ಬ್ಯಾಚ್‌ನ ಛತ್ತೀಸಗಡ ಕೇಡರ್ ಐಎಎಸ್ ಅಧಿಕಾರಿಯಾಗಿರುವ ಸುಬ್ರಹ್ಮಣ್ಯಂ ಅವರನ್ನು 2018ರ ಜೂನ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಅವರ ಅಧಿಕಾರಾವಧಿಯಲ್ಲಿಯೇ, 2019ರಲ್ಲಿ ರದ್ದು ಮಾಡಲಾಯಿತು.
ಅರವಿಂದ್ ಕುಮಾರ್ ಹಾಗೂ ಗೋಯೆಲ್ ಅವರು ಪಾಕಿಸ್ತಾನಕ್ಕೆ ಸಂಬಂಧಿಸಿದ ವಿದ್ಯಮಾನಗಳಲ್ಲಿ ಪರಿಣತಿ ಹೊಂದಿದ್ದಾರೆ. 2019ರ ಫೆಬ್ರುವರಿ 26ರಂದು ಗಡಿ ನಿಯಂತ್ರಣ ರೇಖೆ ಬಳಿಯ ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳ ಮೇಲೆ ನಡೆದ ವಾಯುದಾಳಿಯಲ್ಲಿ ಈ ಇಬ್ಬರು ಅಧಿಕಾರಿಗಳ ಪಾತ್ರ ದೊಡ್ಡದಿದೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.