ಶ್ರೀನಗರ:ಪುಲ್ವಾಮ ಮತ್ತು ಆವಂತಿಪುರದಲ್ಲಿ ಉಗ್ರ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಪಾಕಿಸ್ತಾನವು ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಟ್ಟೆಚ್ಚರ ವಿಧಿಸಲಾಗಿದೆ. ಇದೇ ಮಾಹಿತಿಯನ್ನು ಪಾಕಿಸ್ತಾನವು ಅಮೆರಿಕದ ಜತೆಗೂ ಹಂಚಿಕೊಂಡಿದೆ.
‘ಅಲ್‌ಖೈದಾದ ಕಮಾಂಡರ್ ಬುರ್ಹಾನ್ ಎಂಬುವವನೊಂದಿಗೆ ಸಂಪರ್ಕ ಹೊಂದಿದ್ದ ಜಾಕಿರ್ ಮೌಸಾ ಎಂಬಾತನನ್ನು ಭದ್ರತಾ ಸಿಬ್ಬಂದಿ ಮೇ 24ರಂದು ಪುಲ್ವಾಮದ ತ್ರಾಲ್ ಎಂಬಲ್ಲಿ ಎನ್‌ಕೌಂಟರ್‌ನಲ್ಲಿ ಕೊಂದಿದ್ದರು. ಇದಕ್ಕೆ ಪ್ರತಿಕಾರವಾಗಿ ಉಗ್ರರು ದಾಳಿ ನಡೆಸಲು ಹೊಂಚು ಹಾಕಿದ್ದಾರೆ.ಆವಂತಿಪುರ ಮತ್ತು ಪುಲ್ವಾಮ ಪಟ್ಟಣಗಳಲ್ಲಿ ಅತ್ಯಾಧುನಿಕ ಸ್ಫೋಟಕಗಳನ್ನು (ಐಇಡಿ) ವಾಹನಗಳ ಮೂಲಕ ತಂದು ಸ್ಫೋಟಿಸುವುದುಉಗ್ರರ ಯೋಜನೆಯಾಗಿದೆ,’ ಎಂದು ಪಾಕಿಸ್ತಾನವು ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದೆ. ಇದೇ ಹಿನ್ನೆಲೆಯಲ್ಲಿ, ಎಚ್ಚರಿಕೆಯಿಂದ ಇರುವಂತೆ ಜಮ್ಮು ಕಾಶ್ಮೀರದ ಎಲ್ಲ ಭದ್ರತಾ ಏಜನ್ಸಿಗಳಿಗೂ ತಿಳಿಸಲಾಗಿದೆ.
ಸಂಭಾವ್ಯ ದಾಳಿಯ ಬಗ್ಗೆಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಕಚೇರಿಗೆ ಮಾಹಿತಿ ರವಾನಿಸಲಾಗಿದೆ. ಪಾಕಿಸ್ತಾನ ಇದೇ ಮಾಹಿತಿಯನ್ನು ಅಮೆರಿಕದೊಂದಿಗೂ ಹಂಚಿಕೊಂಡಿದೆ. ಪಾಕಿಸ್ತಾನ ನೀಡಿದ್ದ ಮಾಹಿತಿಯನ್ನು ಅಮೆರಿಕವೂ ಭಾರತದೊಂದಿಗೆ ಹಂಚಿಕೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಇದೇ ವರ್ಷದ ಫೆಬ್ರವರಿ 14ರಂದು ವಾಹನದಲ್ಲಿ ಸ್ಫೋಟಗಳನ್ನು ತಂದುಪುಲ್ವಾಮದಲ್ಲಿ ಉಗ್ರಗಾಮಿಗಳು ವಿಧ್ವಂಸಕ ಕೃತ್ಯ ಎಸಗಿದ್ದರು. ಈ ಘಟನೆಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹತರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.