ADVERTISEMENT

J'khand polls: ಸಿಎಂ ಸೊರೇನ್ ವಿರುದ್ಧ BJPಯಿಂದ ಗಮಾಲಿಯೆಲ್ ಹೆಂಬ್ರೋಮ್ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 5:42 IST
Last Updated 28 ಅಕ್ಟೋಬರ್ 2024, 5:42 IST
   

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು (ಸೋಮವಾರ) ಬಿಡುಗಡೆ ಮಾಡಿದೆ. ಬರ್ಹೈತ್ ಕ್ಷೇತ್ರದಿಂದ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಗಮಾಲಿಯೆಲ್ ಹೆಂಬ್ರೋಮ್ ಅವರನ್ನು ಕಣಕ್ಕಿಳಿಸಿದೆ.

ಬಿಜೆಪಿಯ ಮಿತ್ರಪಕ್ಷ ಎಜೆಎಸ್‌ಯು ಸದಸ್ಯ ಗಮಾಲಿಯೆಲ್ ಹೆಂಬ್ರೋಮ್ ಅವರು ಜೆಎಂಎಂ ನಾಯಕ ಮತ್ತು ಜಾರ್ಖಂಡ್ ಹಾಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ ಬರ್ಹೈತ್ ಕ್ಷೇತ್ರದಿಂದ ನಮ್ಮ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಇಂದು (ಸೋಮವಾರ) ಪ್ರಕಟಿಸಿದೆ.

2019ರ ಚುನಾವಣೆಯಲ್ಲಿ ಎಜೆಎಸ್‌ಯು ಟಿಕೆಟ್‌ನಲ್ಲಿ ಸೊರೇನ್ ವಿರುದ್ಧ ಸ್ಪರ್ಧಿಸಿದ್ದ ಹೆಂಬ್ರೋಮ್ ಸೋಲನುಭವಿಸಿದ್ದರು.

ADVERTISEMENT

ರಾಜ್ಯದ 81 ವಿಧಾನಸಭಾ ಸ್ಥಾನಗಳ ಪೈಕಿ 68 ಸ್ಥಾನಗಳಲ್ಲಿ ಬಿಜೆಪಿ ಸ್ಪರ್ಧಿಸುತ್ತಿದ್ದು, ಉಳಿದವುಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ಅಕ್ಟೋಬರ್ 19ರಂದು 66 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು.

ಇಂಡಿಯಾ ಕೂಟದ ಮಿತ್ರ ಪಕ್ಷಗಳಾದ ‌ಕಾಂಗ್ರೆಸ್ ಮತ್ತು ಜೆಎಂಎಂ 70 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಉಳಿದ 11 ಸ್ಥಾನಗಳಲ್ಲಿ ಆರ್‌ಜೆಡಿ ಮತ್ತು ಎಡ ಪಕ್ಷಗಳು ಸ್ಪರ್ಧಿಸಲಿವೆ. ಸದ್ಯ ಜೆಎಂಎಂ 43 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ವಿರೋಧ ಪಕ್ಷದ ಪಾಳಯದಲ್ಲಿ ಬಿಜೆಪಿ 68, ಎಜೆಎಸ್‌ಯು 10, ಜೆಡಿಯು 2 ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಒಂದು ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭಾಸಭೆಗೆ ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.

ಜೆಎಂಎಂ ನಾಯಕರಿಗೆ ₹ 5 ಕೋಟಿ ಆಮಿಷ–ಆರೋಪ:

ಸಿಎಂ ಸೊರೇನ್‌ ಅವರ ಕ್ಷೇತ್ರವಾಗಿರುವ ಬರ್ಹೈತ್‌ನಲ್ಲಿ ಅಭ್ಯರ್ಥಿಗಳೇ ಇಲ್ಲದ ಕಾರಣ ಬಿಜೆಪಿ, ಜೆಎಂಎಂ ನಾಯಕರಿಗೆ ₹ 5 ಕೋಟಿ ಆಮಿಷ ಒಡ್ಡುತ್ತಿದೆ ಎಂದು ಜೆಎಂಎಂ ನಾಯಕ ಮನೋಜ್‌ ಪಾಂಡೆ ಭಾನುವಾರ ಆರೋಪಿಸಿದ್ದರು.

ಸೊರೇನ್‌ ಅವರ ಎದುರು ಕಣಕ್ಕಿಳಿಯಲು ಅವರಿಗೆ (ಬಿಜೆಪಿ) ಈವರೆಗೆ ಸೂಕ್ತ ಅಭ್ಯರ್ಥಿ ಸಿಕ್ಕಿಲ್ಲ. ಹಾಗಾಗಿ, ಹುಡುಕಾಟ ಮುಂದುವರಿಸಿದ್ದಾರೆ. ₹ 5 ಕೋಟಿ ಪ್ಯಾಕೇಜ್‌ ಘೋಷಿಸಿ ನಮ್ಮ ಪಕ್ಷದ ಯಾರನ್ನಾದರೂ ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.