ಧನ್ಬಾದ್ (ಜಾರ್ಖಂಡ್): ರಾಮ ಮಂದಿರಕ್ಕಾಗಿ ಪ್ರಾರ್ಥಿಸಿ ಕಳೆದ 30 ವರ್ಷಗಳಿಂದ ಮೌನ ವ್ರತ ಆಚರಿಸುತ್ತಿರುವ ಸಾವಿತ್ರಿ ದೇವಿ(85) ಎಂಬುವವರು ಜ.22ರಂದು ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಯಾದ ನಂತರ ‘ವ್ರತ’ ಕೈಬಿಡಲಿದ್ದಾರೆ.
‘1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ದಿನದಿಂದಲೇ ಮೌನ ವ್ರತ ಆರಂಭಿಸಿದ ನನ್ನ ತಾಯಿ, ರಾಮ ಮಂದಿರ ಉದ್ಘಾಟನೆಗೊಂಡ ನಂತರವೇ ವ್ರತ ನಿಲ್ಲಿಸುವುದಾಗಿ ಶಪಥ ಮಾಡಿದ್ದರು’ ಎಂದು ಸಾವಿತ್ರಿ ದೇವಿ ಅವರ ಕಿರಿಯ ಮಗ ರಾಮ್ ಅಗರ್ವಾಲ್ ತಿಳಿಸಿದ್ದಾರೆ.
ಕುಟುಂಬದ ಸದಸ್ಯರೊಂದಿಗೆ ಸಾವಿತ್ರಿ ದೇವಿ ಅವರು ಹೇಗೆ ಸಂವಹನ ಮಾಡುತ್ತಾರೆ ಎಂಬ ಪ್ರಶ್ನೆಗೆ, ‘ಮೌನ ವ್ರತ ಕೈಗೊಂಡ ದಿನದಿಂದ ಕುಟುಂಬದ ಸದಸ್ಯರೊಂದಿಗೆ ಸಂಜ್ಞೆ ಮೂಲಕ ಮಾತನಾಡುತ್ತಿದ್ದರು. ಅರ್ಥವಾಗದೆ ಇದ್ದ ಸಂದರ್ಭ ಅದನ್ನು ಹಾಳೆ ಮೇಲೆ ಬರೆದು ತಿಳಿಸುತ್ತಿದ್ದರು’ ಎಂದರು.
‘2020ರವರೆಗೂ ಮಧ್ಯಾಹ್ನದ ನಂತರ ಒಂದು ಗಂಟೆ ಮಾತನಾಡುತ್ತಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರೆವೇರಿಸಿದ ನಂತರ ಸಂಪೂರ್ಣವಾಗಿ ಮೌನವಾಗಿದ್ದರು’ ಎಂದು ಹೇಳಿದರು.
‘ನಾಲ್ಕು ಹೆಣ್ಣುಮಕ್ಕಳು ಸೇರಿದಂತೆ ಎಂಟು ಮಕ್ಕಳ ತಾಯಿಯಾದ ಸಾವಿತ್ರಿ ದೇವಿ ಅವರು ಪತಿಯ ಮರಣದ ನಂತರ ತಮ್ಮ ಜೀವನವನ್ನು ಸಂಪೂರ್ಣವಾಗಿ ರಾಮನಿಗೆ ಮುಡಿಪಾಗಿಟ್ಟಿದ್ದಾರೆ. ರಾಮಮಂದಿರ ನಿರ್ಮಾಣಕ್ಕಾಗಿ ಶಬರಿಯಂತೆ ಕಾದಿದ್ದಾರೆ’ ಎಂದು ಕುಟುಂಬದ ಮತ್ತೊರ್ವ ಸದಸ್ಯರು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ‘ಮೌನ ಮಾತಾ’ ಎಂದು ಪ್ರಸಿದ್ಧರಾಗಿರುವ ಸಾವಿತ್ರಿ ದೇವಿ ಅವರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಧನ್‌ಬಾದ್‌ನಿಂದ ಉತ್ತರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.