ADVERTISEMENT

ಜೆಕೆಎಲ್‌ಎಫ್‌ ನಿಷೇಧ

ಪ್ರತ್ಯೇಕತಾವಾದಿ ಚಟುವಟಿಕೆಗೆ ಉತ್ತೇಜನ: ಆರೋಪ

ಪಿಟಿಐ
Published 22 ಮಾರ್ಚ್ 2019, 20:28 IST
Last Updated 22 ಮಾರ್ಚ್ 2019, 20:28 IST
ಯಾಸೀನ್‌ ಮಲಿಕ್‌
ಯಾಸೀನ್‌ ಮಲಿಕ್‌   

ನವದೆಹಲಿ: ಭಯೋತ್ಪಾದನೆ ನಿಗ್ರಹ ಕಾಯ್ದೆ ಅಡಿಯಲ್ಲಿ ಯಾಸೀನ್‌ ಮಲಿಕ್‌ ನೇತೃತ್ವದ ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌ಗೆ (ಜೆಕೆಎಲ್‌ಎಫ್‌) ನಿಷೇಧ ವಿಧಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದ ಆರೋಪಕ್ಕಾಗಿ ಕೇಂದ್ರ ಸರ್ಕಾರ ಶುಕ್ರವಾರ ಈ ಕ್ರಮಕೈಗೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಭದ್ರತೆ ಕುರಿತಾದ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ADVERTISEMENT

ಭಯೋತ್ಪಾದನೆ ಸಂಘಟನೆಗಳೊಂದಿಗೆ ಜೆಕೆಎಲ್‌ಎಫ್‌ ನಿಕಟ ಸಂಪರ್ಕ ಹೊಂದಿದ್ದು, ಜಮ್ಮು ಮತ್ತು ಕಾಶ್ಮೀರ ಹಾಗೂ ಇತರೆಡೆ ಉಗ್ರಗಾಮಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

‘ಭಯೋತ್ಪಾದನೆ ಚಟುವಟಿಕೆಗಳನ್ನು ಸರ್ಕಾರ ಸಹಿಸಿಕೊಳ್ಳುವುದಿಲ್ಲ. ಪ್ರತ್ಯೇಕತಾವಾದಿ ಚಟುವಟಿಕಗಳನ್ನು ಕೈಗೊಳ್ಳುವಲ್ಲಿ ಜೆಕೆಎಲ್‌ಎಫ್‌ ಮುಂಚೂಣಿಯಲ್ಲಿದೆ ಹಾಗೂ 1989ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಯಲ್ಲಿ ಭಾಗಿಯಾಗಿತ್ತು. ಇದರಿಂದಾಗಿ ಪಂಡಿತರು ಸಾಮೂಹಿಕವಾಗಿ ಕಾಶ್ಮೀರದಿಂದ ವಲಸೆ ಹೋದರು’ ಎಂದು ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗೌಬಾ ತಿಳಿಸಿದ್ದಾರೆ.

ಜೆಕೆಎಲ್‌ಎಫ್‌ ಮುಖ್ಯಸ್ಥ ಯಾಸೀನ್‌ ಮಲಿಕ್‌ ಪ್ರಸ್ತುತ ಜಮ್ಮುವಿನ ಕೊಟ್‌ ಬಲ್ವಾಲ್‌ ಜೈಲಿನಲ್ಲಿರಿಸಲಾಗಿದೆ. ವಾಯು ಪಡೆಯ ನಾಲ್ವರು ಯೋಧರನ್ನು ಶ್ರೀನಗರದಲ್ಲಿ ಹತ್ಯೆ ಮಾಡಿರುವುದು ಮತ್ತು ಕೇಂದ್ರದ ಮಾಜಿ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್‌ ಪುತ್ರಿ ರುಬಿಯಾ ಸಯೀದ್‌ ಅವರನ್ನು ಅಪಹರಿಸಿದ ಪ್ರಕರಣದ ವಿಚಾರಣೆಯನ್ನು ಯಾಸೀನ್‌ ಮಲಿಕ್‌ ಎದುರಿಸುವ ಸಾಧ್ಯತೆ ಇದೆ.

ಪಾಕಿಸ್ತಾನದ ಅಮಾನುಲ್ಲಾ ಖಾನ್‌ 1970ರಲ್ಲಿ ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ಜೆಕೆಎಲ್‌ಎಫ್‌ ಸಂಘಟನೆ ಸ್ಥಾಪಿಸಿದ. 1971ರಲ್ಲಿ ಶ್ರೀನಗರದಿಂದ ಜಮ್ಮುಗೆ ತೆರಳುತ್ತಿದ್ದ ಇಂಡಿಯನ್‌ ಏರ್‌ಲೈನ್ಸ್‌ ವಿಮಾನವನ್ನು ಅಪಹರಿಸಿದ ಬಳಿಕ ಜೆಕೆಎಲ್‌ಎಫ್‌ ಸಂಘಟನೆ ಕುಖ್ಯಾತಿ ಪಡೆಯಿತು. 1984ರಲ್ಲಿ ಬ್ರಿಟನ್‌ನಲ್ಲಿದ್ದ ಭಾರತೀಯ ರಾಜತಾಂತ್ರಿಕ ರವೀಂದ್ರ ಮಹತ್ರೆ ಅವರನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಜೆಕೆಎಲ್‌ಎಫ್‌ ಭಾಗಿಯಾಗಿತ್ತು. ಒಂದು ವಾರದ ಬಳಿಕ ಜೆಕೆಎಫ್‌ ಕಾರ್ಯಕರ್ತ ಮಖ್‌ಬೂಲ್‌ ಭಟ್‌ನನ್ನು ಭಾರತ ಗಲ್ಲಿಗೇರಿಸಿತ್ತು.

ಇದೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಷೇಧಿಸಿರುವ ಎರಡನೇ ಸಂಘಟನೆ ಇದಾಗಿದೆ. ಜಮಾತ್‌–ಎ–ಇಸ್ಮಾಮಿ ಸಂಘಟನೆಯನ್ನು ಈ ಮೊದಲು ನಿಷೇಧಿಸಲಾಗಿತ್ತು.

**

ದೇಶದ ಭದ್ರತೆಗೆ ಬೆದರಿಕೆವೊಡ್ಡುತ್ತಿರುವ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಹತ್ತಿಕ್ಕಲು ಸರ್ಕಾರ ಬದ್ಧವಾಗಿದೆ
- ರಾಜೀವ್‌ ಗೌಬಾ, ಕೇಂದ್ರ ಗೃಹ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.