ರಾಂಚಿ: ಜೆಎಂಎಂ ಶಾಸಕಾಂಗ ಪಕ್ಷದ ನಾಯಕ ಚಂಪೈ ಸೊರೇನ್ ಅವರು ಜಾರ್ಖಂಡ್ ನೂತನ
ಮುಖ್ಯಮಂತ್ರಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರ ಜತೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಅಲಂಗೀರ್ ಆಲಂ ಮತ್ತು ಆರ್‌ಜೆಡಿ ನಾಯಕ ಸತ್ಯಾನಂದ್ ಭೋಕ್ತಾ ಅವರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ದರ್ಬಾರ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಜೆಎಂಎಂ ನೇತೃತ್ವದ ಮೈತ್ರಿಕೂಟದ (ಕಾಂಗ್ರೆಸ್, ಆರ್‌ಜೆಡಿ) ಹಿರಿಯ ನಾಯಕರು ಈ ವೇಳೆ ಹಾಜರಿದ್ದರು. ಆದಿವಾಸಿ ನಾಯಕರೂ ಆಗಿರುವ 67 ವರ್ಷದ ಚಂಪೈ ಅವರು ರಾಜ್ಯದ 12ನೇ ಮುಖ್ಯಮಂತ್ರಿ. ಜಾರ್ಖಂಡ್‌ನ ಕೊಲ್ಹಾನ್ ಪ್ರದೇಶದವರಾದ ಅವರು, ಈ ಪ್ರದೇಶದಿಂದ ಮುಖ್ಯಮಂತ್ರಿಯಾದ ಆರನೆಯವರು.
ಜಾರ್ಖಂಡ್ ಅಭಿವೃದ್ಧಿಗೆ ಬದ್ಧ: ‘ಜಾರ್ಖಂಡ್‌ನ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ. ಅಲ್ಲದೆ ಹಿಂದಿನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಕೈಗೊಂಡಿದ್ದ ಕಲ್ಯಾಣ ಯೋಜನೆಗಳನ್ನು ಮುಂದುವರಿಸುತ್ತೇನೆ. ಆದಿವಾಸಿಗಳು ಮತ್ತು ಇತರರ ಅಭಿವೃದ್ಧಿಗಾಗಿ ನಾವು ಜಲ್, ಜಂಗಲ್, ಜಮೀನ್ ಹೋರಾಟವನ್ನು ಮುಂದುವರಿಸುತ್ತೇವೆ’ ಎಂದು ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಪ್ರತಿಕ್ರಿಯಿಸಿದರು.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಚಂಪೈ ಅವರು, ಬುಡಕಟ್ಟು ಸಮುದಾಯದ ನಾಯಕರಾದ ಬಿರ್ಸಾ ಮುಂಡಾ ಮತ್ತು ಮತ್ತು ಸಿಧೂ ಕನ್ಹೊ ಅವರಿಗೆ ಗೌರವ ಅರ್ಪಿಸಿದರು. ಚಂಪೈ ಅವರ ಗ್ರಾಮ ಜಿಲಿಂಗ್
ಗೋರಾದಲ್ಲಿ ಅವರ ಸಂಬಂಧಿಕರು ಮತ್ತು ಕುಟುಂಬದ ಸದಸ್ಯರು ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು.
ಹೈದರಾಬಾದ್‌ಗೆ ಶಾಸಕರು
ಹೈದರಾಬಾದ್ (ಪಿಟಿಐ): ಜಾರ್ಖಂಡ್‌ನ ಆಡಳಿತಾರೂಢ ಜೆಎಂಎಂ ನೇತೃತ್ವದ ಮೈತ್ರಿಕೂಟದ ಸುಮಾರು 40 ಶಾಸಕರು ಶುಕ್ರವಾರ ಹೈದರಾಬಾದ್‌ಗೆ ಬಂದಿಳಿದರು.
ಚಂಪೈ ಸೊರೇನ್ ನೇತೃತ್ವದ ನೂತನ ಸರ್ಕಾರ ಇದೇ 5ರಂದು ವಿಶ್ವಾಸ ಮತ ಎದುರಿಸಲಿದ್ದು, ಅಷ್ಟರಲ್ಲಿ ವಿರೋಧ ಪಕ್ಷ ಬಿಜೆಪಿಯು ಶಾಸಕರ ಖರೀದಿ ಯತ್ನ ನಡೆಸಬಹುದು ಎಂಬ ಆತಂಕದ ಕಾರಣ ಮೈತ್ರಿಕೂಟದ ಶಾಸಕರನ್ನು ಹೈದರಾಬಾದ್‌ಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎರಡು ವಿಮಾನಗಳಲ್ಲಿ ಬೇಗಂಪೇಟೆ ವಿಮಾನ ನಿಲ್ದಾಣಕ್ಕೆ ಸುಮಾರು 40 ಶಾಸಕರು ಬಂದಿಳಿದರು.
‘ಜಾರ್ಖಂಡನ್ ಹುಲಿ’
ರಾಂಚಿ (ಪಿಟಿಐ): ಜಾರ್ಖಂಡ್‌ನ ಸೆರೈಕೆಲಾ–ಖಾರ್ಸಾ ವಾನ್ ಜಿಲ್ಲೆಯ ಗ್ರಾಮ ಜಿಲಿಂಗ್‌ಗೋರಾದ ಕೃಷಿ ಕುಟುಂಬ ದವರಾದ 67 ವರ್ಷದ ಚಂಪೈ ಸೊರೇನ್ ಅವರು, 1990ರ ದಶಕದಲ್ಲಿ ಪ್ರತ್ಯೇಕ ರಾಜ್ಯ ರಚನೆಗಾಗಿ ಸುದೀರ್ಘ ಕಾಲ ಹೋರಾಟ ನಡೆಸಿದವರು. ಇದಕ್ಕಾಗಿಯೇ ಅವರನ್ನು ‘ಜಾರ್ಖಂಡನ್ ಹುಲಿ’ ಎಂದು ಕರೆಯಲಾಗುತ್ತದೆ.
ಪ್ರತ್ಯೇಕ ರಾಜ್ಯ ಹೋರಾಟದ ಫಲವಾಗಿ 2000ನೇ ಇಸವಿಯಲ್ಲಿ ಬಿಹಾರ ವಿಭಜನೆಯಾಗಿ ಜಾರ್ಖಂಡ್ ರಾಜ್ಯ ರಚನೆಯಾಯಿತು. ಜಾರ್ಖಂಡ್ ಮುಕ್ತಿ ಮೋರ್ಚಾದ ಅಧ್ಯಕ್ಷ ಶಿಬು ಸೊರೇನ್ ಅವರ ನಿಷ್ಠರಾದ ಚಂಪೈ ಅವರು ಶಿಬು ಸೊರೇನ್ ಮತ್ತು ಅವರ ಮಗ ಹೇಮಂತ್ ಸೊರೇನ್ ನಂತರ ಆ ಸ್ಥಾನಕ್ಕೇರಿದ ಜೆಎಂಎಂನ ಮೂರನೆಯವರು.
‘ನನ್ನ ತಂದೆಯೊಂದಿಗೆ (ಸಿಮಲ್ ಸೊರೇನ್) ಹಿಂದೆ ಹೊಲದಲ್ಲಿ ಉಳುಮೆ ಮಾಡುತ್ತಿದ್ದೆ. ಈಗ ಅದೃಷ್ಟವು ನನಗೆ ವಿಭಿನ್ನ ಪಾತ್ರ ನೀಡಿದೆ’ ಎಂದು ಚಂಪೈ ಅವರು ಜೆಎಂಎಂ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಪ್ರತಿಕ್ರಿಯಿಸಿದ್ದರು.
ಇದೇ 5ರಂದು ವಿಶ್ವಾಸ ಮತಯಾಚನೆ: ಜಾರ್ಖಂಡ್‌ನಲ್ಲಿ ರಚನೆಯಾಗಿರುವ ಚಂಪೈ ಸೊರೇನ್ ನೇತೃತ್ವದ ಸಮ್ಮಿಶ್ರ ಸರ್ಕಾರವು ಇದೇ 5ರಂದು ವಿಶ್ವಾಸ ಮತ ಕೋರಲಿದೆ ಎಂದು ಸಚಿವ ಅಲಂಗೀರ್ ಆಲಂ ಶುಕ್ರವಾರ ತಿಳಿಸಿದರು.
5 ದಿನ ಇ.ಡಿ ವಶಕ್ಕೆ ಹೇಮಂತ್ ಸೊರೇನ್
ರಾಂಚಿ (ಪಿಟಿಐ): ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದ ಪ್ರಕ್ರರಣದಲ್ಲಿ ಬಂಧಿತರಾಗಿರುವ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಐದು ದಿನಗಳವರೆಗೆ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. ಈ ಕುರಿತು ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿದೆ ಎಂದು ವಕೀಲರು ತಿಳಿಸಿದ್ದಾರೆ. ಗುರುವಾರ ಸೊರೇನ್ ಅವರನ್ನು ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಒಪ್ಪಿಸಿತ್ತು.
ಹೇಮಂತ್ ಪತ್ನಿ ಕಲ್ಪನಾ ಅವರು ರಾಜ್ಯದ ಮುಂದಿನ ಸಿಎಂ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಪಕ್ಷದ ಶಾಸಕಾಂಗ ಸಭೆಯಲ್ಲಿ ಚಂಪೈ ಅವರನ್ನು ಆಯ್ಕೆ ಮಾಡಲಾಗಿದೆ.
'ಬಹುಮತ ಸಾಬೀತಿಗೆ 10 ದಿನಗಳ ಕಾಲಾವಕಾಶ'
ಚಂಪೈ ಸೊರೇನ್ ಸರ್ಕಾರ ಬಹುಮತ ಸಾಬೀತು ಮಾಡಲು 10 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜೇಶ್ ಠಾಕೂರ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಜಾರ್ಖಂಡ್‌ನಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರ್ಕಾರದ ಭಾಗವಾಗಿದೆ.
'ನಾವು ಒಂದಾಗಿದ್ದೇವೆ. ನಮ್ಮ ಮೈತ್ರಿಯು ಪ್ರಬಲವಾಗಿದೆ. ಇದನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಚಂಪೈ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.