ರಾಂಚಿ: ಮುಖ್ಯಮಂತ್ರಿ ಹೇಮಂತ್ ಸೊರೇನ್ ನೇತೃತ್ವದ ಜಾರ್ಖಂಡ್ ಸರ್ಕಾರದ ಸಂಪುಟ ಸಚಿವರಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ಶಾಸಕ ರಾಮ್‌ದಾಸ್ ಸೊರೇನ್ ಇಂದು (ಶುಕ್ರವಾರ) ಪ್ರಮಾಣವಚನ ಸ್ವೀಕರಿಸಿದ್ದಾರೆ.
ಬಿಜೆಪಿಗೆ ಸೇರಲು ಸನ್ನಿಹಿತರಾಗಿರುವ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಅವರ ಸ್ಥಾನಕ್ಕೆ ರಾಮ್‌ದಾಸ್ ಆಯ್ಕೆಯಾಗಿದ್ದಾರೆ.
ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮ್‌ದಾಸ್ ಅವರಿಗೆ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸೇರಿದಂತೆ ಮಿತ್ರಪಕ್ಷಗಳ ಇತರೆ ನಾಯಕರು ಉಪಸ್ಥಿತರಿದ್ದರು.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿದ್ದ ಹೇಮಂತ್ ಸೊರೇನ್ ಜನವರಿ 31ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಐದು ತಿಂಗಳ ಬಳಿಕ ಅವರು ಜೂನ್ 28ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.
ಫೆಬ್ರುವರಿ 2ರಂದು ಚಂಪೈ ಸೊರೇನ್ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು. ಜುಲೈ 3ರಂದು ರಾಜೀನಾಮೆ ಸಲ್ಲಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿದ್ದ ಹೇಮಂತ್ ಸೊರೇನ್ ಜುಲೈ 4ರಂದು ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಮತ್ತೊಂದೆಡೆ ಪಕ್ಷ ತೊರೆದಿರುವ ಚಂಪೈ ಸೊರೇನ್, ಬಿಜೆಪಿಗೆ ಸೇರುವುದು ಬಹುತೇಕ ಖಚಿತವೆನಿಸಿದೆ. ಮೂಲಗಳ ಪ್ರಕಾರ ಅವರು ಇಂದು (ಶುಕ್ರವಾರ) ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.