ನವದೆಹಲಿ: ಬಾಲಿವುಡ್‌ನ ಖ್ಯಾತ ಚಿತ್ರ ಸಾಹಿತಿ ಹಾಗೂ ಉರ್ದು ಕವಿ ಗುಲ್ಜಾರ್ ಮತ್ತು ಸಂಸ್ಕೃತ ವಿದ್ವಾಂಸ ಜಗದ್ಗುರು ರಾಮಭದ್ರಾಚಾರ್ಯ ಅವರು 58ನೇ ಜ್ಞಾನಪೀಠ ಪ್ರಶಸ್ತಿಗೆ (2023) ಭಾಜನರಾಗಿದ್ದಾರೆ ಎಂದು ಜ್ಞಾನಪೀಠ ಆಯ್ಕೆ ಸಮಿತಿ ಶನಿವಾರ ಪ್ರಕಟಿಸಿದೆ.
ಹಿಂದಿ ಚಿತ್ರರಂಗದಲ್ಲಿ ಗುಲ್ಜಾರ್ ಖ್ಯಾತರಾಗಿದ್ದಾರೆ. ಅವರೂ ಪ್ರಸಿದ್ಧ ಉರ್ದು ಕವಿಯು ಹೌದು. ಈ ಹಿಂದೆ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2002), ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2013), ಪದ್ಮ ಭೂಷಣ (2004) ಹಾಗೂ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಮಧ್ಯ ಪ್ರದೇಶದ ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕ ಮತ್ತು ಮುಖ್ಯಸ್ಥರಾದ ರಾಮಭದ್ರಾಚಾರ್ಯರು ಪ್ರಸಿದ್ಧ ಹಿಂದೂ ಆಧ್ಯಾತ್ಮಿಕ ನಾಯಕ ಮತ್ತು ಶಿಕ್ಷಣ ತಜ್ಞರಾಗಿದ್ದಾರೆ. ಅವರು 100ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.
ಗುಲ್ಜಾರ್ ಅವರಿಗೆ ಈಗಾಗಲೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2002), ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (2013), ಪದ್ಮ ಭೂಷಣ (2004) ಹಾಗೂ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸಂದಿವೆ.
2009ರಲ್ಲಿ ಆಸ್ಕರ್ ಮತ್ತು 2010ರಲ್ಲಿ ಗ್ರ್ಯಾಮಿ ಪ್ರಶಸ್ತಿ ಪಡೆದ ‘ಸ್ಲಮ್‌ಡಾಗ್ ಮಿಲಿಯನೇರ್’ ಚಿತ್ರದ ‘ಜೈ ಹೋ...’ ಸೇರಿದಂತೆ ಗುಲ್ಜಾರ್ ಅವರು ಹಲವು ಗೀತೆಗಳನ್ನು ರಚಿಸಿದ್ದಾರೆ. ಅಲ್ಲದೆ ‘ಮಾಚಿಸ್’ (1996), ‘ಓಂಕಾರ’ (2006), ‘ದಿಲ್ ಸೇ...’ (1998) ಮತ್ತು ‘ಗುರು’ (2007) ಸೇರಿ ಹಲವು ಸಿನಿಮಾ ಗಳಲ್ಲಿನ ಅವರ ಗೀತೆಗಳು ಮೆಚ್ಚುಗೆ
ಗಳಿಸಿವೆ.
ನಿರ್ದೇಶಕರಾಗಿಯೂ ಹೆಸರು ಮಾಡಿರುವ ಗುಲ್ಜಾರ್ ಅವರು, ‘ಕೋಶಿಶ್’ (1972), ‘ಪರಿಚಯ್’ (1972), ‘ಇಜಾಜತ್’ (1977) ಮತ್ತು ದೂರದರ್ಶನ ಧಾರಾವಾಹಿ ‘ಮಿರ್ಜಾ ಗಾಲಿಬ್’ (1988) ನಿರ್ದೇಶಿಸಿ ಕೆಲ
ಪ್ರಶಸ್ತಿಗಳನ್ನು ಪಡೆದಿದ್ದಾರೆ.
‘ಗುಲ್ಜಾರ್ ಅವರು ತಮ್ಮ ಸುದೀರ್ಘ ಚಲನಚಿತ್ರ ಪಯಣದ ಜತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಿ ದ್ದಾರೆ. ಅವರು ಕಾವ್ಯದಲ್ಲಿ ‘ತ್ರಿವೇಣಿ’ ಎಂಬ ಮೂರು ಸಾಲುಗಳ ಹೊಸ ಪ್ರಕಾರವನ್ನು ಪರಿಚಯಿಸಿದ್ದಾರೆ. ಕೆಲ ಸಮಯದಿಂದ ಅವರು ಮಕ್ಕಳ ಕಾವ್ಯದ ಬಗ್ಗೆಯೂ ಗಂಭೀರವಾಗಿ ಗಮನ ಹರಿಸಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.
22 ಭಾಷೆ ಬಲ್ಲವರು:
ರಮಾನಂದ ಪಂಥದ ನಾಲ್ವರು ಜಗದ್ಗುರು ರಮಾನಂದಾಚಾರ್ಯ ರಲ್ಲಿ ರಾಮಭದ್ರಾಚಾರ್ಯರೂ ಒಬ್ಬರು. ಅವರು 1982ರಿಂದಲೂ ಈ ಸ್ಥಾನದಲ್ಲಿದ್ದಾರೆ. ಸುಮಾರು 22 ಭಾಷೆಗಳಲ್ಲಿ ಮಾತನಾಡ ಬಲ್ಲವರಾದ ರಾಮಭದ್ರಾಚಾರ್ಯರು, ಸಂಸ್ಕೃತ, ಹಿಂದಿ, ಅವಧಿ, ಮೈಥಿಲಿ ಸೇರಿದಂತೆ ಹಲವು ಭಾರತೀಯ ಭಾಷೆಗಳ ಬರಹಗಾರರು. 2015ರಲ್ಲಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಸಂದಿದೆ.
ರಾಮಭದ್ರಾಚಾರ್ಯ ಅವರು ಎರಡು ತಿಂಗಳ ಮಗುವಾಗಿದ್ದಾಗಲೇ ದೃಷ್ಟಿ ಕಳೆದುಕೊಂಡವರು. ತಮ್ಮ ಐದನೇ ವಯಸ್ಸಿನಲ್ಲಿಯೇ ಅವರು ಭಗವದ್ಗೀತೆ ಮತ್ತು ಎಂಟನೇ ವಯಸ್ಸಿನ ವೇಳೆಗೆ ಸಂಪೂರ್ಣ ‘ರಾಮಚರಿತಮಾನಸ’ವನ್ನು ಕಂಠಪಾಠ ಮಾಡಿದ್ದರು.
ಜ್ಞಾನಪೀಠ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದವರಿಗೆ ಕೊಡಲಾಗುತ್ತದೆ. ಸಂಸ್ಕೃತ ಭಾಷಾ ಸಾಹಿತ್ಯಕ್ಕೆ ಎರಡನೇ ಬಾರಿ ಮತ್ತು ಉರ್ದು ಭಾಷಾ ಸಾಹಿತ್ಯಕ್ಕೆ ಐದನೇ ಬಾರಿ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿಯು ₹21 ಲಕ್ಷ ನಗದು ಮತ್ತು ವಾಗ್ದೇವಿಯ ಪ್ರತಿಮೆ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.