ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ (ಜೆಎನ್‌ಯು) ಸೋಮವಾರ ಭೇಟಿ ನೀಡಿದ ದೆಹಲಿಯ ಅಪರಾಧ ವಿಭಾಗದ ಪೊಲೀಸರು, ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಸೇರಿ ಮೂವರು ವಿದ್ಯಾರ್ಥಿಗಳ ವಿಚಾರಣೆ ನಡೆಸಿದರು.
‘ಜನವರಿ 5ರಂದು ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಯಿಷಿ ಘೋಷ್, ಪಂಕಜ್ ಮಿಶ್ರ, ವಾಸ್ಕರ್ ವಿಜಯ್ ಅವರ ವಿಚಾರಣೆ ನಡೆಸಲಾಯಿತು’ ಎಂದು ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದರು.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇತ್ತೀಚೆಗೆ ಬಿಡುಗಡೆ ಮಾಡಿದ್ದ 9 ಶಂಕಿತರ ಪಟ್ಟಿಯಲ್ಲಿ ಈ ಮೂವರ ಹೆಸರುಗಳೂ ಇವೆ. ‘ಜನವರಿ 1ರಿಂದಲೇ ಕ್ಯಾಂಪಸ್‌ನಲ್ಲಿ ಶುಲ್ಕ ಏರಿಕೆ ಮತ್ತು ನೋಂದಣಿ ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ಶುರುವಾಗಿದ್ದು, ನಂತರ ಅದು ಹಿಂಸಾತ್ಮಕ ರೂಪ ಪಡೆದುಕೊಂಡಿದೆ’ ಎಂದು ದೆಹಲಿ ಪೊಲೀಸರು ಕಳೆದ ವಾರ ಹೇಳಿದ್ದರು.
ದೆಹಲಿ ಪೊಲೀಸರು ಜೆಎನ್‌ಎಸ್‌ಯು ಅಧ್ಯಕ್ಷೆ ಆಯಿಷಿ ಘೋಷ್, ಎಂಎ ಕೊರಿಯನ್ ವಿದ್ಯಾರ್ಥಿ ವಿಕಾಸ್ ಪಟೇಲ್, ಸಮಾಜ ಶಾಸ್ತ್ರ ಶಾಲೆಯ ಪಂಕಜ್ ಮಿಶ್ರಾ, ಜೆಎನ್‌ಯು ಮಾಜಿ ವಿದ್ಯಾರ್ಥಿ ಚುಂಚುನ್ ಕುಮಾರ್, ಸಂಸ್ಕೃತ ಪಿ.ಎಚ್‌ಡಿ ವಿದ್ಯಾರ್ಥಿ ಯೋಗೇಂದ್ರ ಭಾರಧ್ವಜ್, ಸಮಾಜ ಶಾಸ್ತ್ರದ ದೋಲನ್ ಸಮನತ ಮತ್ತು ಸುಚೇತ ತಲುಕ್ಡರ್, ಭಾಷೆ ಮತ್ತು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಪ್ರಿಯಾ ರಂಜನ್ ಎಂಬುವರನ್ನು ಶಂಕಿತರೆಂದು ಗುರುತಿಸಿದ್ದರು.
ಈ ಪ್ರಕರಣದಲ್ಲಿ ಶಂಕಿತರಾಗಿರುವ ವಿಕಾಸ್ ಪಟೇಲ್ ಮತ್ತು ಯೋಗೇಂದ್ರ ಭಾರಧ್ವಾಜ್ ಅವರು ಎಬಿವಿಪಿ ಸಂಘಟನೆಗೆ ಸೇರಿದ್ದು, ಉಳಿದವರೆಲ್ಲ ಎಡಪಂಥೀಯ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.
ಟೆಲಿವಿಷನ್ ವಾಹಿನಿಯೊಂದು ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ಕಾಣಿಸಿಕೊಂಡ ಅಕ್ಷತ್ ಅಶ್ವತಿ ಮತ್ತು ರೋಹಿತ್ ಶಾ ಎಂಬುವವರಿಗೂ ತನಿಖೆಯಲ್ಲಿ ಪಾಲ್ಗೊಳ್ಳುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಇದಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೊಗಳಿಂದ ಕ್ಯಾಂಪಸ್‌ನಲ್ಲಿ ಮುಸುಕುಧಾರಿಯಾಗಿ ಕೈಯಲ್ಲಿ ಕೋಲು ಹಿಡಿದಿದ್ದ ವಿದ್ಯಾರ್ಥಿನಿ ಕೋಮಲ್ ಶರ್ಮಾ ಎಂಬುದಾಗಿ ಪೊಲೀಸರು ಗುರುತಿಸಿದ್ದಾರೆ. ದೌಲತ್ ರಾಮ್ ಕಾಲೇಜಿನ ವಿದ್ಯಾರ್ಥಿನಿಯಾದ ಶರ್ಮಾ ಅವರಿಗೂ ಪೊಲೀಸರು ಈಗಾಗಲೇ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.