ನವದೆಹಲಿ: ‘ಜವಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಎಂದಿಗೂ ರಾಷ್ಟ್ರ ವಿರೋಧಿ ಆಗಿರಲಿಲ್ಲ. ತುಕ್ಡೆ, ತುಕ್ಡೆ ಗ್ಯಾಂಗ್‌ನ ಭಾಗವೂ ಆಗಿರಲಿಲ್ಲ’ ಎಂದು ಕುಲಪತಿ ಶಾಂತಿಶ್ರೀ ಡಿ.ಪಂಡಿತ್ ಪ್ರತಿಪಾದಿಸಿದ್ದಾರೆ.
ಜೆಎನ್‌ಯು ಎಂದಿಗೂ ಬೆಚ್ಚನೆಯ ಅಭಿಪ್ರಾಯಭೇದ ಹೊಂದಿದ್ದ, ಚರ್ಚೆಗೆ ವೇದಿಕೆಯಾಗಿದ್ದ, ಪ್ರಜಾಸತ್ತಾತ್ಮಕ ಸಂಸ್ಥೆಯಾಗಿತ್ತು ಎಂದು ಅವರು ಗುರುವಾರ ಹೇಳಿದ್ದಾರೆ.
ಜೆಎನ್‌ಯುವಿನ ಮೊದಲ ಮಹಿಳಾ ಕುಲಪತಿಯೂ ಆದ ಅವರು ಗುರುವಾರ ಪಿಟಿಐ ಸುದ್ದಿಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡಿದ್ದರು. ವಿಶ್ವವಿದ್ಯಾಲಯವು ಕೇಸರೀಕರಣವಾಗಿಲ್ಲ. ನಿತ್ಯದ ಕಾರ್ಯವೈಖರಿಯಲ್ಲಿ ಕೇಂದ್ರ ಸರ್ಕಾರದ ಒತ್ತಡವೂ ಇಲ್ಲ ಎಂದು ಪ್ರತಿಪಾದಿಸಿದರು.
ಆದರೆ, ನಾನು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಜೊತೆಗೆ ಗುರುತಿಸಿಕೊಂಡಿದ್ದೇನೆ ಎಂಬುದಕ್ಕೆ ವಿಷಾದವು ಇಲ್ಲ, ಅದನ್ನು ನಾನು ಮರೆಮಾಚಿಯೂ ಇಲ್ಲ ಎಂದು ತಿಳಿಸಿದರು.
ಚೆನ್ನೈನ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಅವರು ಬದುಕಿನ ಹಾದಿಯನ್ನು ಮೆಲುಕು ಹಾಕಿದರು. ‘ಜೆಎನ್‌ಯುಗೆ ಉನ್ನತ ಕ್ಯೂಎಸ್ ಶ್ರೇಣಿ ತಂದ ಸಂಘಿ ವಿ.ಸಿ’ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ ಎಂದರು.
ಒಂದು ವಿಶ್ವವಿದ್ಯಾಲಯವಾಗಿ ನಾವು ಕೇಸರೀಕರಣವನ್ನು ಮೀರಿದ್ದೆವು. ಇದು, ದೇಶಕ್ಕಾಗಿ ಇರುವ ಸಂಸ್ಥೆ. ಸದಾ ಅಭಿವೃದ್ಧಿಯ ಪರವಾಗಿ ಇದೆ. ವೈಯಕ್ತಿಕವಾಗಿ ನಾನು ಕೂಡಾ ಅಭಿವೃದ್ಧಿ, ಪ್ರಜಾಪ್ರಭುತ್ವ, ಭಿನ್ನಾಭಿಪ್ರಾಯ, ವೈವಿಧ್ಯ, ಚರ್ಚೆ, ಸಂವಾದದ ಪರವಾಗಿಯೇ ಇದ್ದೇನೆ ಎಂದು ಹೇಳಿದರು.
‘ಜೆಎನ್‌ಯು ರಾಷ್ಟ್ರವಿರೋಧಿ’ ಎಂಬ ಅಭಿಪ್ರಾಯ ಮೂಡಿತ್ತು ಎಂಬ ಪ್ರಶ್ನೆಗೆ, ‘ಇಂಥ ಉಲ್ಲೇಖ ಸರಿಯಲ್ಲ. ಹಿಂದೆ ಎರಡೂ ಕಡೆಯಿಂದ ತಪ್ಪುಗಳಾಗಿವೆ. ಟೀಕೆಗಳು ಇದ್ದೇ ಇರುತ್ತವೆ. ಟೀಕಿಸುತ್ತಾರೆ, ಭಿನ್ನಾಭಿಪ್ರಾಯಗಳಿವೆ ಎಂಬ ಮಾತ್ರಕ್ಕೆ ರಾಷ್ಟ್ರವಿರೋಧಿ ಎನ್ನಲಾಗದು. ಬಹುಶಃ ಇದನ್ನು ವಿಶ್ವವಿದ್ಯಾಲಯದ ಆಗಿನ ಆಡಳಿತ ಆರ್ಥ ಮಾಡಿಕೊಳ್ಳಲಿಲ್ಲ ಎಂದು ಅಭಿಪ್ರಾಯಪಟ್ಟರು.
’ನಾನು ಈ ವಿ.ವಿ.ಯಲ್ಲಿ ಕಲಿಯುವಾಗ ಎಡರಂಗದ ಪ್ರಾಬಲ್ಯವಿತ್ತು. ಆಗಲೂ ಕೂಡ ಯಾರೂ ರಾಷ್ಟ್ರ ವಿರೋಧಿಯಾಗಿರಲಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.