ADVERTISEMENT

ಶೆಹ್ಲಾ ರಷೀದ್ ವಿರುದ್ಧ ತಂದೆಯಿಂದಲೇ ದೇಶದ್ರೋಹದ ಆರೋಪ

ತಂದೆ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ ಶೆಹ್ಲಾ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 12:54 IST
Last Updated 1 ಡಿಸೆಂಬರ್ 2020, 12:54 IST
ಶೆಹ್ಲಾ ರಷೀದ್
ಶೆಹ್ಲಾ ರಷೀದ್   

ಶ್ರೀನಗರ: ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ ಮಾಜಿ ಉಪಾಧ್ಯಕ್ಷೆ ಹಾಗೂ ವಿದ್ಯಾರ್ಥಿ ಕಾರ್ಯಕರ್ತೆ ಶೆಹ್ಲಾ ರಷೀದ್ ಹಾಗೂ ಅವರ ತಂದೆ ಅಬ್ದುಲ್ ರಷೀದ್ ಶೋರಾ ಅವರ ನಡುವಿನ ಕೌಟುಂಬಿಕ ಕಲಹವು ಬಹಿರಂಗಗೊಂಡಿದ್ದು, ತಂದೆಯೇ ಮಗಳ ವಿರುದ್ಧ ದೇಶವಿರೋಧಿ ಚಟುವಟಿಕೆಗಳ ಆರೋಪ ಹೊರಿಸಿದ್ದಾರೆ.

‘ಎನ್‌ಐಎನಿಂದ ಬಂಧಿತವಾಗಿರುವ ಭಯೋತ್ಪಾದಕ ಚಟುವಟಿಕೆಗೆ ಹಣ ಪೂರೈಸುತ್ತಿದ್ದ ಫೈನಾನ್ಸರ್‌ವೊಬ್ಬರಿಂದ ಮಗಳು ಶೆಹ್ಲಾ ಕೋಟ್ಯಂತರ ರೂಪಾಯಿ ಹವಾಲಾ ಹಣ ಪಡೆದಿದ್ದಾಳೆ’ ಎಂದು ಶೆಹ್ಲಾ ತಂದೆ ಅಬ್ದುಲ್ ರಷೀದ್ ಶೋರಾ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ‘ನನ್ನ ತಂದೆ ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ’ ಎಂದು ಶೆಹ್ಲಾ ದೂರಿದ್ದಾರೆ.

‘ಭಯೋತ್ಪಾದಕರಿಗೆ ಹಣ ಒದಗಿಸುತ್ತಿರುವ ಇಬ್ಬರು ವ್ಯಕ್ತಿಗಳಿಂದ ನನ್ನ ಮಗಳು ₹ 3 ಕೋಟಿ ಪಡೆದಿದ್ದಾಳೆ. ಈ ಬಗ್ಗೆ ತನಿಖೆ ನಡೆಸಬೇಕು. ಮಗಳು ಶೆಹ್ಲಾ, ಅವಳ ಸಹೋದರಿ ಮತ್ತು ತಾಯಿ ಹಾಗೂ ಶೆಹ್ಲಾಳ ಅಂಗರಕ್ಷನಿಂದಲೂ ನನಗೆ ಜೀವ ಬೆದರಿಕೆ ಇದೆ’ ಎಂದೂ ಸೋಮವಾರ ಶೋರಾ ಆರೋಪಿಸಿದ್ದಾರೆ.

ADVERTISEMENT

‘ರಾಜಕೀಯ ಪಕ್ಷ ಸೇರಲು ಮಾಜಿ ಶಾಸಕ ಎಂಜಿನಿಯರ್ ರಷೀದ್ ಹಾಗೂ ಉದ್ಯಮಿ ಝಹೂರ್ ವತಾಲಿ ಅವರಿಂದ ಶೆಹ್ಲಾ ₹ 3 ಕೋಟಿ ಪಡೆದಿದ್ದಾಳೆ. ಇದಕ್ಕೂ ಮುನ್ನ ಮಾಜಿ ಐಎಎಸ್ ಅಧಿಕಾರಿ ಷಾ ಫೈಸಲ್ ಪಕ್ಷಕ್ಕೆ ಶೆಹ್ಲಾಳನ್ನು ಸೇರಿಸಲು ಹಣದ ಆಮಿಷ ಒಡ್ಡಲಾಗಿತ್ತು. ಆದರೆ, ಅದನ್ನು ನಾನು ನಿರಾಕರಿಸಿದ್ದೆ. ಆದರೆ, ಶೆಹ್ಲಾ ಈ ಒಪ್ಪಂದವನ್ನು ಒಪ್ಪಿಕೊಂಡಿದ್ದಳು. ರಷೀದ್, ಝಹೂರ್ ವತಾಲಿ ಅವರನ್ನು ಜತೆಗೆ ಭೇಟಿಯಾಗಿರುವ ಹಾಗೂ ಹಣ ಪಡೆದಿರುವ ಕುರಿತು ಎಲ್ಲಿಯೂ ಬಾಯಿ ಬಿಡಬಾರದು. ಬಾಯಿ ಬಿಟ್ಟರೆ ನನ್ನ ಜೀವ ಅಪಾಯಕ್ಕೀಡಾಗುತ್ತದೆ ಎಂದು ಮಗಳು ಬೆದರಿಕೆಯೊಡ್ಡಿದ್ದಳು’ ಎಂದೂ ಶೋರಾ ದೂರಿದ್ದಾರೆ.

ಶೆಹ್ಲಾ ಪ್ರತಿಕ್ರಿಯೆ:

ತಂದೆ ಮಾಡಿರುವ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ಶೆಹ್ಲಾ ರಷೀದ್, ‘ನನಗೆ ತಿಳಿವಳಿಕೆ ಬಂದಾಗಿನಿಂದಲೂ ನನ್ನ ತಂದೆಯು, ನನ್ನಮ್ಮ, ಸಹೋದರಿ ಮತ್ತು ನನಗೆ ಕಿರುಕುಳ ನೀಡುತ್ತಲೇ ಬಂದಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ನನ್ನ ಜೈವಿಕ ತಂದೆಯು, ನನ್ನ ತಾಯಿ, ಸಹೋದರಿ ಹಾಗೂ ನನ್ನ ವಿರುದ್ಧ ಮಾಡಿರುವ ಆರೋಪಗಳ ವಿಡಿಯೊವನ್ನು ನಿಮ್ಮಲ್ಲಿ ಹಲವರು ನೋಡಿರಬಹುದು. ಹೆಂಡತಿಯನ್ನು ಹೊಡೆಯುವ, ನಿಂದಿಸುವ ವ್ಯಕ್ತಿ ಆತ. ನನ್ನ ತಾಯಿ ಕುಟುಂಬದ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಎಲ್ಲವನ್ನೂ ಇದುವರೆಗೆ ಸಹಿಸಿಕೊಂಡಿದ್ದರು. ಆದರೆ, ಕೊನೆಗೂ ಆತನ ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳಲು ನಾವು ಮುಂದಾದೆವು. ಇದಕ್ಕೆ ಪ್ರತಿಯಾಗಿ ನನ್ನ ತಂದೆ ಈ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ’ ಎಂದು ಶೆಹ್ಲಾ ಟ್ವೀಟ್ ಮಾಡಿದ್ದಾರೆ.

‘ತನ್ನ ಹೆಂಡತಿ ಮತ್ತು ಮಕ್ಕಳ ವಿರುದ್ಧ ನಿಂದನೀಯ ನಡವಳಿಕೆಯ ಬಗ್ಗೆ ಸ್ಪಷ್ಟನೆ ನೀಡುವಂತೆ’ ತನ್ನ ತಂದೆಗೆ 2005ರಲ್ಲಿ ಶ್ರೀನಗರದ ಚಾನ್ಪೊರಾದ ಮಸೀದಿ ಸಮಿತಿಯು ನೀಡಿರುವ ಪತ್ರವನ್ನೂ ಶೆಹ್ಲಾ ಟ್ವಿಟ್ಟರ್‌ನಲ್ಲಿ ಲಗತ್ತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.