ADVERTISEMENT

JNU ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ: ಇಬ್ಬರು ಅಸ್ವಸ್ಥ; ಚಿಕಿತ್ಸೆಗೆ ನಿರಾಕರಣೆ

ಪಿಟಿಐ
Published 19 ಆಗಸ್ಟ್ 2024, 9:43 IST
Last Updated 19 ಆಗಸ್ಟ್ 2024, 9:43 IST
   

ನವದೆಹಲಿ: ಶಿಷ್ಯ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 8ನೇ ದಿನಕ್ಕೆ ಕಾಲಿಟ್ಟಿದ್ದು, ಇಬ್ಬರು ಅಸ್ವಸ್ಥಗೊಂಡಿದ್ದಾರೆ. 

ಅಸ್ವಸ್ತಗೊಂಡವರನ್ನು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯಲು ನಿರಾಕರಿಸಿದ್ದಾರೆ.

‘ಅಂಕ ಆಧಾರಿತ ಶಿಷ್ಯ ವೇತನವನ್ನು ಕನಿಷ್ಠ ₹5 ಸಾವಿರಕ್ಕೆ ಹೆಚ್ಚಿಸಬೇಕು. ಫೆಬ್ರುವರಿಯಲ್ಲೇ ಉದ್ಘಾಟನೆಗೊಂಡಿದ್ದರೂ ಇಂದಿಗೂ ಕಾರ್ಯನಿರ್ವಹಿಸದ ಬರಾಕ್ ವಿದ್ಯಾರ್ಥಿ ನಿಲಯವನ್ನು ಪುನರಾರಂಭಿಸಬೇಕು. ವಿಶ್ವವಿದ್ಯಾಲಯದ ಕ್ಯಾಂಪಸ್‌ ಒಳಗೆ ಪ್ರತಿಭಟನೆ ನಡೆಸಿದರೆ ₹20 ಸಾವಿರವರೆಗೂ ದಂಡ ವಿಧಿಸಲು ಅಧಿಕಾರವಿರುವ ಮುಖ್ಯ ಶಿಸ್ತುಸಮಿತಿ ಅಧಿಕಾರಿಯ ಕಚೇರಿಯನ್ನು ಪುನರ್‌ರಚನೆ ಮಾಡಬೇಕು’ ಎಂಬ ಬೇಡಿಕೆಯನ್ನು ವಿದ್ಯಾರ್ಥಿಗಳು ಮುಂದಿಟ್ಟುಕೊಂಡು ಸತ್ಯಾಗ್ರಹ ಆರಂಭಿಸಿದ್ದಾರೆ.

ADVERTISEMENT

‘ಲೈಂಗಿಕ ಕಿರುಕುಳ ವಿರುದ್ಧ ಲಿಂಗ ಸಂವೇದನಾ ಸಮಿತಿ ರಚಿಸಬೇಕು ಎಂದು ಆ. 11ರಿಂದ ವಿದ್ಯಾರ್ಥಿಗಳು ಧರಣಿ ನಡೆಸುತ್ತಿದ್ದಾರೆ. 

‘ಅಸ್ವಸ್ತಗೊಂಡ ಇಬ್ಬರು ವಿದ್ಯಾರ್ಥಿಗಳ ಆರೋಗ್ಯ ಬಿಗಡಾಯಿಸಿದ್ದರಿಂದ, ಅವರನ್ನು ಏಮ್ಸ್‌ಗೆ ದಾಖಲಿಸಲು ಶಿಫಾರಸು ಮಾಡಲಾಗಿತ್ತು. ಆದರೆ ಇವರು ವೈದ್ಯಕೀಯ ಸಲಹೆ ಧಿಕ್ಕರಿಸಿ ಬಿಡುಗಡೆ ಕೋರಿ ಪತ್ರ ಬರೆದಿದ್ದಾರೆ’ ಎಂದು ಜೆಎನ್‌ಯು ಕ್ಯಾಂಪಸ್‌ನ ಮುಖ್ಯ ವೈದ್ಯಕೀಯ ಅಧಿಕಾರಿ ಫೌಝಿಯಾ ಫಿರ್ದೋಸ್‌ ಓಝೈರ್‌ ಹೇಳಿದ್ದಾರೆ.

ಜೆಎನ್‌ಯು ಕುಲಪತಿ ಶಾಂತಿಶ್ರೀ ಡಿ. ಪಂಡಿತ್ ಪ್ರತಿಕ್ರಿಯಿಸಿ, ‘ಅಸ್ವಸ್ತಗೊಂಡ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಚಿಕಿತ್ಸೆಯನ್ನು ತಿರಸ್ಕರಿಸುವ ಮೂಲಕ ತಮ್ಮ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ. ಹೀಗಾಗಿ ಆಡಳಿತ ಮಂಡಳಿಯು ಅವರ ಪಾಲಕರಿಗೆ ಈ ವಿಷಯವನ್ನು ಮುಟ್ಟಿಸಿದೆ. ವಯಸ್ಕರಾಗಿರುವ ಅವರು, ತಮಗೆ ನೀಡಲಾಗುತ್ತಿದ್ದ ಚಿಕಿತ್ಸೆಯನ್ನು ನಿರಾಕರಿಸಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.