ಲಖನೌ:ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ಕಳೆದ ವಾರ ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್(ಎನ್‌ಎಸ್‌ಎಸ್‌ಒ)ಸಮೀಕ್ಷಾ ವರದಿ ಪ್ರಕಟವಾದ ಬಳಿಕ ಉದ್ಯೋಗ ಸೃಷ್ಟಿ ವಿಚಾರವುಕೇಂದ್ರ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವಣ ವಾಗ್ವಾದಕ್ಕೆ ಕಾರಣವಾಗಿದೆ. ನಿರುದ್ಯೋಗ ಸಮಸ್ಯೆಯು2017–18ರ ಅವಧಿಯಲ್ಲಿ ಶೇ.6.1 ರಷ್ಟು ಹೆಚ್ಚಳವಾಗಿದೆ. ಇದು ಕಳೆದ45 ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ್ದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಆದರೆ ಈ ವರದಿಯನ್ನು ಸಂಸತ್‌ನಲ್ಲಿ ಅಲ್ಲಗಳೆದಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ‘ದೇಶದಲ್ಲಿ ಕೋಟ್ಯಂತರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆ’ಎಂದು ಸಮರ್ಥಿಸಿಕೊಂಡದ್ದರು. ಅದಕ್ಕೆ ಪೂರಕವಾಗಿ ಕೇಂದ್ರ ಸಚಿವ ಅರುಣ್ ಜೇಟ್ಲಿ ‘ದೇಶದಲ್ಲಿ ನಿರುದ್ಯೋಗ ಸಮಸ್ಯೆಯೇ ಇಲ್ಲ’ಎಂದು ಹೇಳಿಕೆ ನೀಡಿದ್ದರು. ಆದರೆ ಬಿಜೆಪಿ ಸರ್ಕಾರವಿರುವಉತ್ತರ ಪ್ರದೇಶದಲ್ಲಿ ಕೇಂದ್ರ ಸರ್ಕಾರಕ್ಕೆ ಮುಖಭಂಗ ಮಾಡುವಂತ ವರದಿಯೊಂದನ್ನು ದಿ ಪ್ರಿಂಟ್‌ಪ್ರಕಟವಾಗಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿಖಾಲಿಯಿರುವ 62 ಟೆಲಿಫೋನ್ ಮೆಸೆಂಜೆರ್ ಹುದ್ದೆಗಳಿಗೆ 3700 ಪಿಎಚ್‌ಡಿ ಅಭ್ಯರ್ಥಿಗಳೂ ಸೇರಿದಂತೆ ಲಕ್ಷಕ್ಕೂ ಹೆಚ್ಚು ಜನರುಅರ್ಜಿ ಸಲ್ಲಿಸಿರುವುದು ವರದಿಯಾಗಿದೆ.
ಕಳೆದ ವರ್ಷ ಜುಲೈನಲ್ಲಿಟೆಲಿಫೋನ್ ಮೆಸೆಂಜೆರ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಟೆಲಿಫೋನ್ ಮೆಸೆಂಜರ್‌ಗಳು ಕಚೇರಿ ಕೆಲಸದ ಜೊತೆಗೆ ಪೊಲೀಸ್ ಇಲಾಖೆಯ ಪತ್ರವ್ಯವಹಾರ, ದಾಖಲೆಗಳಿಗೆ ಸಂಬಂಧಿಸಿದಂತೆವಿವಿಧ ಠಾಣೆಗಳ ನಡುವಣ ಬೈಸಿಕಲ್ ಮೂಲಕ ಸಂಪರ್ಕ ಸಾಧಿಸಬೇಕಾಗುತ್ತದೆ. ಈ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 5ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಸೈಕಲ್ ಓಡಿಸುವುದನ್ನು ಕಲಿತಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ಆದರೆ ಅರ್ಜಿಗಳು ಸಲ್ಲಿಕೆಯಾದ ನಂತರ ಆಯ್ಕೆ ಮಂಡಳಿಯು ಅಚ್ಚರಿಗೊಳಗಾಗಿದೆ.
ಖಾಲಿಯಿರುವ ಕೇವಲ 62 ಹುದ್ದೆಗಳಿಗೆ ಸುಮಾರು 3700 ಪಿಎಚ್‌ಡಿ, 50ಸಾವಿರ ಪದವಿ, 28ಸಾವಿರ ಸ್ನಾತಕೋತ್ತರ ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ಬಿಟೆಕ್, ಎಂಎಸ್ಸಿ ಹಾಗೂ ಎಂಬಿಎ ಪದವಿ ಗಳಿಸಿರುವವರೂ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಆಯ್ಕೆಗಾಗಿ ಲಿಖಿತ ಪರೀಕ್ಷೆ ನಡೆಸಲು ಇಲಾಖೆಯು ನಿರ್ಧರಿಸಿದೆ.
ಸೂಕ್ತ ಅಭ್ಯರ್ಥಿಗಳ ಕೊರತೆ ಇದೆ ಎಂದ ಸಚಿವ
ರಾಜ್ಯದಲ್ಲಿ ಉದ್ಯೋಗಾವಕಾಶಗಳ ಅಲಭ್ಯತೆಯೇನೂ ಇಲ್ಲ. ಆದರೆ ಸೂಕ್ತ ಅಭ್ಯರ್ಥಿಗಳಕೊರೆತೆಯಿದೆ ಎಂದುಕಾರ್ಮಿಕ ಮತ್ತು ಉದ್ಯಮ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹೇಳಿಕೆ ನೀಡಿದ್ದಾರೆ. ಇಂಥದೇ ಹೇಳಿಕೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ನೀಡಿದ್ದರು. ರಾಜ್ಯ ಸರ್ಕಾರವು ಸಮರ್ಥ ಶಿಕ್ಷಕರ ಹುಡುಕಾಟ ನಡೆಸುತ್ತಿದೆ. ಅದು ಸಾಧ್ಯವಾಗಿಲ್ಲ ಎಂದು ಹೇಳಿದ್ದರು. ಇದಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು.
ರಾಜ್ಯದಲ್ಲಿನ ಉದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆಕಾಂಗ್ರೆಸ್ ಶಾಸಕರಾದ ಅಜಯ್ ಕುಮಾರ್ ಲಲ್ಲು ಮತ್ತು ಅದಿತಿ ಸಿಂಗ್ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದ ಮೌರ್ಯ, ‘ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆಯಾದರೂ, ಖಾಸಗಿ ಕ್ಷೇತ್ರದಲ್ಲಿ ಹೆಚ್ಚಳವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಲು ಜನಸಂಖ್ಯೆ ಏರಿಕೆಯೇ ಕಾರಣ’ ಎಂದು ಪ್ರತಿಕ್ರಿಯಿಸಿದ್ದರು.
ಮೌರ್ಯ ಅವರು ನೀಡಿದ ಮಾಹಿತಿಯಂತೆ 2016ರಿಂದ 2018ರ ಆಗಸ್ಟ್ 31ರ ಅವಧಿಯಲ್ಲಿ ರಾಜ್ಯದ ನಿರುದ್ಯೋಗಿಗಳ ಸಂಖ್ಯೆ ಒಟ್ಟು 9 ಲಕ್ಷದಷ್ಟು ಹೆಚ್ಚಳವಾಗಿದೆ. ಆದರೆ, ರಾಜ್ಯ ಕಾರ್ಮಿಕ ಇಲಾಖೆ ವೆಬ್‌ಸೈಟ್‌ನಲ್ಲಿ 22 ಲಕ್ಷ ನಿರುದ್ಯೋಗ ಸೃಷ್ಟಿಯಾಗಿರುವ ಮಾಹಿತಿ ಲಭ್ಯವಿದೆ. ಅದರಲ್ಲಿ ಪದವೀದರರ ಸಂಖ್ಯೆಯೇ ಬರೋಬ್ಬರಿ 7ಲಕ್ಷ.
ಖಾಸಗಿ ವಲಯದಲ್ಲಿನ ಉದ್ಯೋಗಗಳಿಗಾಗಿ ನಡೆದ ಉದ್ಯೋಗ ಮೇಳಗಳ ಸಂದರ್ಭದಲ್ಲಿಏಪ್ರಿಲ್ 1, 2017– ಮಾರ್ಚ್ 31, 2018ರ ಅವಧಿಯಲ್ಲಿ ಒಟ್ಟು 63,152 ಯುವಕರು ಕೆಲಸ ಪಡೆದುಕೊಂಡಿದ್ದಾರೆ. ಜೊತೆಗೆ ಕೌಶಲ ವಿಕಾಶ್ ಮಿಷನ್ ಅಡಿಯಲ್ಲಿ 1,89,936 ಯುವಕರಿಗೆ ಕೌಶಲ ತರಬೇತಿ ನೀಡಲಾಗಿದೆ. ಆ ಪೈಕಿ 67,003 ಮಂದಿ ಅದೇ ಅವಧಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂದೂ ಲೆಕ್ಕಕೊಟ್ಟಿದ್ದಾರೆ.
ಸರ್ಕಾರ ಉದ್ಯೋಗ ಬಯಕೆಯೇ ಸಮಸ್ಯೆಗೆ ಕಾರಣ
ವಿದ್ಯಾರ್ಥಿಗಳು ಹಾಗೂ ಆಕಾಂಕ್ಷಿಗಳು ಸರ್ಕಾರಿ ಕೆಲಸಗಳನ್ನೇ ನೆಚ್ಚಿಕೊಂಡಿರುವುದು ಭಾರಿ ಪ್ರಮಾಣದ ನಿರುದ್ಯೋಗ ಸಮಸ್ಯೆ ಹೆಚ್ಚಳಕ್ಕೆ ಕಾರಣ.
ಸರ್ಕಾರವು ಕೆಲವೇ ಕೆಲವು ಹುದ್ದೆಗಳಿಗೆ ಅರ್ಜಿ ಆಹ್ವಾನಿಸುತ್ತದೆ. ರೈಲ್ವೆ ಹೊರತಾಗಿ ಯಾವುದೇ ಬೇರೆ ಹುದ್ದೆಗಳಿಗೂ ಕೇಂದ್ರ ಸರ್ಕಾರ ಹೆಚ್ಚಿನ ನೇಮಕಾತಿ ಮಾಡಿಕೊಳ್ಳುವುದಿಲ್ಲ. ರೈಲ್ವೆ ಇಲಾಖೆ ಹುದ್ದೆಗಳಿಗೂ ತಾಂತ್ರಿಕ ಕೌಶಲ ಇರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಉತ್ತರ ಪ್ರದೇಶದ ಉದ್ಯೋಗಾಕಾಂಕ್ಷಿ ದೇವೇಂದ್ರ ಕುಮಾರ್ ಎನ್ನುವವರು ಹೇಳುತ್ತಾರೆ.
ಲಕ್ನೋ ನಿವಾಸಿಯಾಗಿರುವ ಮತ್ತೊ ಹಿಮಾಂಶು ಶ್ರೀವಾಸ್ತವ್, ‘ಖಾಲಿ ಹುದ್ದೆಗಳ ಭರ್ತಿಗೆ ನೇಮಕಾದಿ ಆದೇಶ ಹೊರಡಿಸಿದರೆ ಲಕ್ಷ–ಲಕ್ಷ ಜನರು ಅರ್ಜಿ ಸಲ್ಲಿಸುತ್ತಾರೆ. ಪ್ರತಿ ಖಾಲಿ ಹುದ್ದೆಗೂ ಕನಿಷ್ಠ 5,000 ಅರ್ಜಿಗಳು ಸಲ್ಲಿಕೆಯಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಕೆಲಸ ಪಡೆಯುವುದು ಕಷ್ಟಕರವಾಗಿದೆ. ಅನೇಕ ಪರೀಕ್ಷೆಗಳು ರದ್ದುಗೊಳ್ಳುತ್ತವೆ ಮತ್ತು ಹಲವು ಸಂದರ್ಭಗಳಲ್ಲಿ ಫಲಿತಾಂಶಗಳೇ ಪ್ರಕಟವಾಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.