ನವದೆಹಲಿ: ಗಡಿಯೊಳಗೆ ನುಗ್ಗಿದ ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳನ್ನು ಭಾರತದ ಯುದ್ಧ ವಿಮಾನಗಳು ತಡೆಯೊಡ್ಡಿ ಹಿಮ್ಮೆಟ್ಟಿಸಿದವು. ಈ ಸಂದರ್ಭದಲ್ಲಿ ಪಾಕಿಸ್ತಾನ ವಿಮಾನಗಳು ಬಾಂಬ್‌ಗಳನ್ನು ಎಸೆದು ಹೊರಟವು, ಆದರೆ ಅವುಗಳಿಂದ ಯಾವುದೇ ಹಾನಿ ಮಾಡುವುದು ಸಾಧ್ಯವಾಗಲಿಲ್ಲ ಎಂದು ವಾಯುಪಡೆ ವೈಸ್ ಮಾರ್ಷಲ್ ಆರ್‌ಜಿಕೆ ಕಪೂರ್ ಹೇಳಿದರು.
ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾದಳದ ಪ್ರಮುಖ ಅಧಿಕಾರಿಗಳುಗುರುವಾರ ಸಂಜೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಭಾರತದ ಮಿಗ್–21 ಬೈಸನ್ ಯುದ್ಧ ವಿಮಾನವುಪಾಕಿಸ್ತಾನದ ಒಂದು ಎಫ್–16 ಜೆಟ್ ಹೊಡೆದುರುಳಿಸಿತು. ಆ ವಿಮಾನದ ಅವಶೇಷಗಳು ಭಾರತದ ಗಡಿಯೊಳಗೂ ಪತ್ತೆಯಾಗಿವೆ. ಶುಕ್ರವಾರ ವಿಂಗ್ ಕಮಾಂಡರ್ ಅಭಿನಂದನ್ ಮರಳುತ್ತಿರುವುದು ಸಂತಸ ವಿಷಯ ಎಂದರು.
ಪಾಕಿಸ್ತಾನದ ಯಾವುದೇ ದುಸ್ಸಾಹಸವನ್ನು ಎದುರಿಸಲು ನಾವು ಪೂರ್ಣ ಸಿದ್ಧರಿದ್ದೇವೆ, ಅವರ ಮೇಲೆ ತಕ್ಕ ಕ್ರಮವನ್ನು ಕೈಗೊಳ್ಳಬಹುದು. ದೇಶದ ಪ್ರಜೆಗಳ ಭದ್ರತೆ ಹಾಗೂ ಸುರಕ್ಷತೆಗೆ ಬದ್ಧರಾಗಿದ್ದೇವೆ ಎಂದುನೌಕಾದಳ ರೇರ್ ಅಡ್ಮಿರಲ್ ಡಿಎಸ್ ಗುಜ್ರಾಲ್ ಹೇಳಿದರು.
ಪಾಕಿಸ್ತಾನ ಎಲ್ಲಿಯವರೆಗೂ ಉಗ್ರರನ್ನು ಸಾಗಿಸುತ್ತಿರುತ್ತದೆಯೋ ಅಲ್ಲಿಯ ವರೆಗೂ ನಾವು ಉಗ್ರರ ಶಿಬಿರಗಳನ್ನು ಗುರಿಯಾಗಿಸುತ್ತಿರುತ್ತೇವೆ ಎಂದು ಸೇನೆಯ ಮೇಜರ್ ಜನರಲ್ ಸುರೇಂದ್ರ ಸಿಂಗ್ ಮಹಾಲ್ ಪಾಕಿಸ್ತಾನಕ್ಕೆ ಎಚ್ಚರಿಕೆ ಸಂದೇಶ ನೀಡಿದರು.
ಪಾಕಿಸ್ತಾನದ ಎಫ್–16 ಮೂಲಕ ದಾಳಿ ನಡೆಸಿರುವ ಎಎಂಆರ್‌ಎಎಎಂ (ಅಡ್ವಾನ್ಸ್ಡ್ ಮೀಡಿಯಂ ರೇಂಜ್ ಏರ್–ಟು–ಏರ್ ಮಿಸೈಲ್) ಕ್ಷಿಪಣಿಗೆ ಅವಶೇಷಗಳು ಭಾರತದ ರಜೌರಿ ಭಾಗದಲ್ಲಿ ಪತ್ತೆಯಾಗಿವೆ ಎಂದು ಪಾಕಿಸ್ತಾನ ದಾಳಿ ಬಗೆಗೆ ಸಾಕ್ಷ್ಯಗಳನ್ನುಕಪೂರ್ ಮಾಧ್ಯಮಗಳ ಮುಂದಿಟ್ಟರು. ಭಾರತದ ಗಡಿಯೊಳಗೆ ಪಾಕಿಸ್ತಾನ ದಾಳಿ ನಡೆಸಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಗಳಿವೆ ಎಂದರು.
ಬಾಲಾಕೋಟ್‌ನಲ್ಲಿ ಉಗ್ರ ಶಿಬಿರಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಬಲಿಯಾಗಿರುವ ಉಗ್ರರ ಸಂಖ್ಯೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ, ‘ನಾವು ನಿರ್ನಾಮ ಮಾಡಲು ನಿಗದಿಪಡಿಸಿಕೊಂಡಿದ್ದ ಕಾರ್ಯ ಪೂರ್ಣಗೊಂಡಿದೆ. ಮೃತರ ಸಂಖ್ಯೆಯನ್ನು ಈಗಲೇ ಹೇಳುವುದು ಅವಸರದ ಮಾತಾಗುತ್ತದೆ’ ಎಂದು ಆರ್‌ಜಿಕೆ ಕಪೂರ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.