ADVERTISEMENT

ಒಟಿಟಿ: ಆರ್‌ಎಸ್ಎಸ್‌ ಮುಖ್ಯಸ್ಥರ ಕಳವಳಕ್ಕೆ ಜೋಶಿ ಪ್ರತಿಕ್ರಿಯೆ

‘ಪರಿಶೀಲನೆ ನಡೆಸಲಾಗಿದ್ದು, ಸಂಬಂಧಿತ ಇಲಾಖೆಯು ಕಾರ್ಯಪ್ರವೃತ್ತವಾಗಿದೆ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 14:19 IST
Last Updated 13 ಅಕ್ಟೋಬರ್ 2024, 14:19 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಪ್ರಜಾವಾಣಿ ವಾರ್ತೆ

ನವದೆಹಲಿ: ಒಟಿಟಿ ವೇದಿಕೆಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಮೇಲೆ ನಿಯಂತ್ರಣವಿಲ್ಲದಿರುವ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಾನುವಾರ ತಿಳಿಸಿದ್ದಾರೆ.

‘ಭಾಗವತ್‌ ಅವರ ಮಾತುಗಳನ್ನು ಸರ್ಕಾರ ಒಪ್ಪಿಕೊಳ್ಳುತ್ತದೆ. ಇದು ಜಾಗತಿಕ ಸಮಸ್ಯೆಯಾಗಿದ್ದು, ಈ ಕುರಿತು ಸಾಕಷ್ಟು ದೂರುಗಳು ದಾಖಲಾಗಿವೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಸಂಬಂಧಿತ ಇಲಾಖೆಯು ಕಾರ್ಯಪ್ರವೃತ್ತವಾಗಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಒಟಿಟಿಗಳಲ್ಲಿನ ವಿಷಯಗಳು ಸಾಮಾಜಿಕ ಮೌಲ್ಯಗಳ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಇದರ ನಿಯಂತ್ರಣಕ್ಕೆ ಸೂಕ್ತ ಕಾನೂನಿನ ಅಗತ್ಯವಿದೆ’ ಎಂದು ಭಾಗವತ್‌ ಅವರು ಶನಿವಾರ ನಾಗ್ಪುರದಲ್ಲಿ ಹೇಳಿದ್ದರು.

‘ಸಮಾಜವನ್ನು ಒಗ್ಗೂಡಿಸಲು ಮತ್ತು ಮೌಲ್ಯಗಳನ್ನು ಹೆಚ್ಚಿಸಲು ಸಾಮಾಜಿಕ ಜಾಲತಾಣವನ್ನು ಬಳಸಬೇಕೇ ಹೊರರು, ಸಮಾಜವನ್ನು ಒಡೆಯಲು, ಸ್ವಾಸ್ಥ್ಯವನ್ನು ಹಾಳು ಮಾಡಲು ಅಲ್ಲ ಎಂಬುದನ್ನು ಅದರ ಬಳಕೆದಾರರು ಅರಿತಿರಬೇಕು’ ಎಂದು ಭಾಗವತ್‌ ಹೇಳಿದ್ದರು.

ಒಟಿಟಿ ವೇದಿಕೆಗಳಲ್ಲಿನ ಕಾರ್ಯಕ್ರಮಗಳನ್ನು ಪ್ರಸಾರಕ್ಕೂ ಮೊದಲೇ ನಿಯಂತ್ರಿಸಲು ದೇಶದಲ್ಲಿ ಪ್ರಸ್ತುತ ಯಾವುದೇ ಕಾನೂನುಗಳಿಲ್ಲ. ಕಾರ್ಯಕ್ರಮ ಪ್ರಸಾರವಾದ ಬಳಿಕ ದೂರುಗಳು ದಾಖಲಾದರೆ ಬದಲಾವಣೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.