ADVERTISEMENT

ಸಾಕ್ಷಾತ್ ವರದಿ | ಯಂತ್ರಗಳ ಮೊರೆತ: ‘ಅಲಕಾ’ ಕಣ್ಣೀರು

ಋಷಿಕೇಶ – ಕರ್ಣಪ್ರಯಾಗ ರೈಲು ಮಾರ್ಗ ಕಾಮಗಾರಿ: ಮನೆಗಳಲ್ಲಿ ಬಿರುಕು

ಮಂಜುನಾಥ್ ಹೆಬ್ಬಾರ್‌
Published 12 ಜನವರಿ 2023, 19:45 IST
Last Updated 12 ಜನವರಿ 2023, 19:45 IST
ರುದ್ರ ಪ್ರಯಾಗದ ಬಳಿ ಸುರಂಗದ ಮಣ್ಣನ್ನು ಅಲಕಾನಂದಾ ನದಿ ದಂಡೆಯಲ್ಲಿ ಸುರಿದಿರುವುದು
ರುದ್ರ ಪ್ರಯಾಗದ ಬಳಿ ಸುರಂಗದ ಮಣ್ಣನ್ನು ಅಲಕಾನಂದಾ ನದಿ ದಂಡೆಯಲ್ಲಿ ಸುರಿದಿರುವುದು   

ಕರ್ಣಪ್ರಯಾಗ (ಉತ್ತರಾಖಂಡ): ಹತ್ತಾರು ದೈತ್ಯ ಯಂತ್ರಗಳು ರಮ್ಯ ಬೆಟ್ಟಗಳನ್ನು ಹಗಲಿರುಳು ಕೊರೆಯುತ್ತಿವೆ. ಯಂತ್ರದ ಏಟಿನಿಂದ ಪರ್ವತಗಳು ಕಂಪಿಸುತ್ತಾ ನಿಧಾನಕ್ಕೆ ಕುಸಿಯುತ್ತಿವೆ. ಸುರಂಗ ನಿರ್ಮಾಣಕ್ಕಾಗಿ ಅಗೆದ ಬೆಟ್ಟದ ಮಣ್ಣನ್ನು ಟ್ರಕ್‌ಗಳು ನದಿಯ ಅಂಚಿಗೆ ಸುರಿಯುತ್ತಿವೆ. ‘ಅಭಿವೃದ್ಧಿಯ ಕಸ’ವನ್ನು ಬಲವಂತದಿಂದ ಒಡಲೊಳಗೆ ಸೇರಿಸಿಕೊಂಡ ಅಲಕಾನಂದಾ ನದಿ ಕಣ್ಣೀರು ಸುರಿಸುತ್ತಿದೆ.

ಚಾರ್‌ ಧಾಮ್‌ ಯಾತ್ರಾರ್ಥಿಗಳ, ಪರ್ವತಾರೋಹಿಗಳ ಹಾಗೂ ಪ್ರವಾಸಿಗಳ ಸುಲಲಿತ ಸಂಚಾರಕ್ಕೆ ಅನುಕೂಲ ಕಲ್ಪಿಸಲು ನಿರ್ಮಿಸುತ್ತಿರುವ ರೈಲು ಮಾರ್ಗವೇ ಇಲ್ಲಿನ ಜನರಿಗೆ ಹಾಗೂ ನದಿಗೆ ಸಂಕಟ ತಂದಿಟ್ಟಿದೆ. ‘ಪ್ರಗತಿಯ ಹಾದಿ’ಯು ಹಲವು ಮನೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಆಪತ್ತು ಅರಿತ ಅನೇಕ ಮಂದಿ ಮನೆಗಳನ್ನು ತ್ಯಜಿಸಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಸುರಂಗದ ಲಕ್ಷಾಂತರ ಟನ್ ಮಣ್ಣು ಸೇರಿ ನದಿ ಕಿರಿದಾಗುತ್ತಿದೆ. ನದಿಯೊಳಗೆ ಸಣ್ಣ ಸಣ್ಣ ಮಣ್ಣಿನ ಗುಡ್ಡಗಳು ನಿರ್ಮಾಣವಾಗಿವೆ. ಇವು ನೀರಿನ ಸರಾಗ ಹರಿವಿಗೆ ಅಡ್ಡಿಯಾಗಿವೆ.

ರೈಲ್ವೆ ಇಲಾಖೆಯು ಋಷಿಕೇಶ– ಕರ್ಣಪ್ರಯಾಗ ಪಟ್ಟಣಗಳ ನಡುವೆ ರೈಲು ಮಾರ್ಗ ನಿರ್ಮಿಸುತ್ತಿದೆ. 125 ಕಿ.ಮೀ. ಉದ್ದದ ಈ ಮಾರ್ಗ ನಿರ್ಮಾಣಕ್ಕೆ ಮಾಡುತ್ತಿರುವ ವೆಚ್ಚ ₹16,200 ಕೋಟಿ. ಇದರಲ್ಲಿ ಸುರಂಗ ಮಾರ್ಗ 105 ಕಿ.ಮೀ. ಇರಲಿದೆ. ಉತ್ತರಾಖಂಡದ ಡೆಹ್ರಾಡೂನ್‌, ತೆಹ್ರಿ ಗರ್ವಾಲ್‌, ಪೌರಿ ಗರ್ವಾಲ್‌, ರುದ್ರ ಪ್ರಯಾಗ ಹಾಗೂ ಚಮೋಲಿ ಜಿಲ್ಲೆಗಳಲ್ಲಿ ಹಾದು ಹೋಗುವ ಈ ರೈಲು ಮಾರ್ಗಕ್ಕಾಗಿ 17 ಸುರಂಗಗಳನ್ನು ಕೊರೆಯಲಾಗುತ್ತಿದೆ. 35 ಕಡೆ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ದೇಶದ ಅತೀ ದೊಡ್ಡ ರೈಲ್ವೆ ಸುರಂಗ ಇಲ್ಲೇ ನಿರ್ಮಾಣವಾಗುತ್ತಿದೆ. ಈ ಮಾರ್ಗ ಆರಂಭವಾದ ಬಳಿಕ ಪ್ರಯಾಣದ ಅವಧಿ ಆರು ಗಂಟೆಗಳಿಂದ 3 ಗಂಟೆಗಳಿಗೆ ಇಳಿಯಲಿದೆ ಎಂದು ರೈಲ್ವೆ ಇಲಾಖೆ ಹೆಮ್ಮೆಯಿಂದ ಹೇಳಿಕೊಂಡಿದೆ.

ADVERTISEMENT

ಅಲಕಾನಂದಾ ನದಿಯು ಗಂಗಾ ನದಿಯ ಪ್ರಮುಖ ಉಪನದಿಗಳಲ್ಲಿ ಒಂದು. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉಗಮ ಹೊಂದುವ ಈ ನದಿ 220 ಕಿ.ಮೀ. ಹರಿದು ದೇವ ಪ್ರಯಾಗದಲ್ಲಿ ಭಾಗೀರಥಿ ನದಿಯನ್ನು ಕೂಡಿಕೊಳ್ಳುತ್ತದೆ. ತೆಹ್ರಿ, ರುದ್ರ ಪ್ರಯಾಗ, ಕರ್ಣ ಪ್ರಯಾಗ ಮತ್ತಿತರ ಕಡೆಗಳಲ್ಲಿ ಅಲಕಾನಂದಾ ನದಿಯ ಅಂಚಿನಲ್ಲೇ ರೈಲ್ವೆ ಮಾರ್ಗ ಹಾದು ಹೋಗುತ್ತದೆ. 2024ರ ಡಿಸೆಂಬರ್‌ ಗಡುವಿನೊಳಗೆ ಮಾರ್ಗ ನಿರ್ಮಿಸಬೇಕು ಎಂದು ರೈಲ್ವೆ ಇಲಾಖೆ ಪಣ ತೊಟ್ಟಿದೆ. ನದಿಯ ಅಂಚಿನಲ್ಲಿ ಹತ್ತಾರು ಯಂತ್ರಗಳು ಗುರುವಾರ ಕೆಲಸ ಮಾಡುತ್ತಿದ್ದವು.

ಸುರಂಗದ ಮಣ್ಣನ್ನು ನದಿಯಂಚಿನ ಖಾಲಿ ಜಾಗಕ್ಕೆ ಸುರಿಯಲು ಟ್ರಕ್‌ಗಳು ಸಾಲಾಗಿ ಹೋಗುತ್ತಿದ್ದವು. ನದಿ ಪಕ್ಕದ ಭೂಭರ್ತಿ ಘಟಕಗಳಿಗೆ (ಡಂಪಿಂಗ್‌ ಯಾರ್ಡ್‌) ಹಾಕಿ ಮರಳುತ್ತಿದ್ದವು.

ರುದ್ರ ಪ್ರಯಾಗ ಪಟ್ಟಣದ ಸಮೀಪದ ನದಿ ಪಕ್ಕದ ಸುಮಾರು ಅರ್ಧ ಎಕರೆ ಜಾಗ ಈಗ ಭೂಭರ್ತಿ ಘಟಕವಾಗಿ ರೂಪಾಂತರ ಹೊಂದಿದೆ. ಕಾಮಗಾರಿಯ ಮಣ್ಣನ್ನು ಸುರಿದ ‍ಪರಿಣಾಮ ರಸ್ತೆ ಪಕ್ಕದಲ್ಲಿ ದೊಡ್ಡ ದಿಬ್ಬ ನಿರ್ಮಾಣವಾಗಿದೆ. ಇಲ್ಲಿ ಮಾತಿಗೆ ಸಿಕ್ಕ ಹೋರಾಟಗಾರ ಸಂದೀಪ್‌ ಚಮೋಲಿ, ‘ಈ ವರ್ಷದ ಮಳೆಗಾಲದಲ್ಲಿ ಇಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿ ನದಿಯನ್ನು ಸೇರಿತ್ತು. ಮತ್ತೆ ಅಷ್ಟೇ ಪ್ರಮಾಣದ ಮಣ್ಣನ್ನು ಸುರಿಯಲಾಗಿದೆ. ನೀವು 2–3 ವರ್ಷ ಬಿಟ್ಟು ಮತ್ತೊಮ್ಮೆ ಬನ್ನಿ. ಆಗ ಇಲ್ಲೊಂದು ದೊಡ್ಡ ಹೋಮ್‌ ಸ್ಟೇ ಅಥವಾ ಹೋಟೆಲ್ ತಲೆ ಎತ್ತಿ ನಿಂತಿರುತ್ತದೆ. ನದಿ ಬಹುತೇಕ ಸರ್ವನಾಶದ ಹಾದಿ ತುಳಿದಿರುತ್ತದೆ. ಇಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸುತ್ತಿರುವ ವಿಪತ್ತುಗಳಿಗೆ ಇಂತಹ ಅಭಿವೃದ್ಧಿ ಮಾದರಿಗಳೇ ಕಾರಣ’ ಎಂದು ಬೇಸರಿಸಿದರು.

ಜೋಶಿ ಮಠದ ಮಾದರಿಯಲ್ಲಿ ರುದ್ರ ಪ್ರಯಾಗ, ತೆಹ್ರಿ ಗರ್ವಾಲ್‌, ಪೌರಿ ಗರ್ವಾಲ್‌ ಮತ್ತಿತರ ಕಡೆಗಳಲ್ಲಿ ಮನೆಗಳು ಬಿರುಕು ಬಿಟ್ಟಿವೆ. ಸುರಂಗ ಕಾಮಗಾರಿಯಿಂದ ಭೂಕುಸಿತ ಸಂಭವಿಸಿದೆ. ಮನೆಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡರು.

‘ಪರಿಸರಕ್ಕೆ ಹೆಚ್ಚು ಹಾನಿಯಾಗ ದಂತೆ ತಂತ್ರಜ್ಞಾನ ಬಳಸಿಕೊಂಡು ಸುರಂಗಗಳನ್ನು ನಿರ್ಮಿಸಲಾಗುತ್ತಿದೆ. ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾಮಗಾರಿ ನಡೆಲಾಗುತ್ತಿದೆ. ನದಿ ನೀರಿನ ಹರಿವಿಗೆ ತೊಂದರೆಯಾಗದಂತೆ ಕ್ರಮ ಕೈಗೊ ಳ್ಳಲಾಗಿದೆ’ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ನೆಮ್ಮದಿ ಕಸಿದ ‘ಮಂಡಿ’
ಸರ್ಕಾರಿ ನೌಕರರು, ಸೈನಿಕರು, ವ್ಯಾಪಾರಸ್ಥರು ಮತ್ತಿತರರು ಜೀವಮಾನದಲ್ಲಿ ಕೂಡಿಟ್ಟ ಹಣದಲ್ಲಿ ಬೆಟ್ಟದ ಮೇಲೊಂದು ಮನೆ ಮಾಡಿ ನೆಮ್ಮದಿಯಿಂದ ಜೀವಿಸುತ್ತಿದ್ದರು. ಇಲ್ಲಿ ನಿರ್ಮಾಣವಾದ ಮಂಡಿ (ಮಾರುಕಟ್ಟೆ) ಅವರ ಖುಷಿಯನ್ನೆಲ್ಲ ಕಸಿದುಕೊಂಡಿದೆ. ಇದೀಗ ಮನೆಗಳನ್ನು ಖಾಲಿ ಮಾಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ.

ಇದು ಕರ್ಣ ಪ್ರಯಾಗದ ಬಹುಗುಣ ನಗರದ ನಿವಾಸಿಗಳ ಗೋಳಿನ ಕಥೆ. ಬೆಟ್ಟದ ಮೇಲಿರುವ ಬಹುತೇಕ ಮನೆಗಳು (40 ಮನೆಗಳು) ಕುಸಿಯುವ ಸ್ಥಿತಿಯಲ್ಲಿವೆ. ಕೆಲವೇ ಸಮಯದಲ್ಲಿ ಈ ಮನೆಗಳು ಕುಸಿದು ಬೀಳಬಹುದು ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಮನೆಗಳಲ್ಲಿ ಇದ್ದ ಬಾಡಿಗೆದಾರರು ಮನೆ ಖಾಲಿ ಮಾಡಿ ಹೋಗಿದ್ದಾರೆ. ಉಳಿದವರು ಪುನರ್ವಸತಿಗಾಗಿ ಕಾಯುತ್ತಿದ್ದಾರೆ.

ಇಲ್ಲಿನ ನಿವಾಸಿ ಪ್ರತಿಮಾದೇವಿ ನಾಲ್ಕು ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಜುಲೈ ತಿಂಗಳಲ್ಲಿ ಮೊದಲ ಬಾರಿಗೆ ಮನೆಯಲ್ಲಿ ಬಿರುಕು ಕಾಣಿಸಿಕೊಂಡಿತು. ಕೆಲವೇ ದಿನಗಳಲ್ಲಿ ಬಾಡಿಗೆದಾರರು ಮನೆ ಖಾಲಿ ಮಾಡಿದರು. ಮತ್ತೆ ಯಾರೂ ಬಾಡಿಗೆಗೆ ಬಂದಿಲ್ಲ. ಬಾಡಿಗೆ ಹಣವನ್ನು ನೆಚ್ಚಿಕೊಂಡಿದ್ದ ಈ ಕುಟುಂಬಕ್ಕೆ ಈಗ ದಿಕ್ಕೇ ತೋಚದಂತೆ ಆಗಿದೆ.

‘ನಮ್ಮ ಎಲ್ಲ ಸಮಸ್ಯೆಗಳಿಗೆ ಈ ಮಂಡಿಯೇ ಕಾರಣ. ಮಂಡಿಯ ವಿಕಾಸದಿಂದ ನಮ್ಮ ವಿನಾಶ ಆಗುತ್ತಿದೆ. ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಿಸಿರುವ ಈ ಮಾರುಕಟ್ಟೆಯಲ್ಲಿ ಇರುವುದು ಒಂದೇ ಒಂದು ಅಂಗಡಿ. ಇದಕ್ಕಾಗಿ ನಮ್ಮ ನೆಮ್ಮದಿ ಕಸಿದಿದ್ದಾರೆ. ಆದಾಯದ ಮೂಲವೂ ಹೋಗಿದೆ. ಮನೆಯೂ ಇಲ್ಲದಂತಾಗುತ್ತಿದೆ’ ಎಂದು ಅವರು ನೋವಿನಿಂದ ಹೇಳಿಕೊಂಡರು.

ನಿವೃತ್ತ ಸೈನಿಕ, 80ರ ಹರೆಯದ ಗಬ್ಬರ್ ಸಿಂಗ್‌ ರಾವತ್‌ ಈ ಪಟ್ಟಣದಲ್ಲಿ 1975ರಿಂದ ವಾಸಿಸುತ್ತಿದ್ದಾರೆ. ಸೇನೆಯಿಂದ ನಿವೃತ್ತರಾದ ಬಳಿಕ 2003ರಲ್ಲಿ ಇಲ್ಲಿ ಮನೆ ಕಟ್ಟಿಕೊಂಡರು. ‘2013ರ ವರೆಗೆ ಎಲ್ಲವೂ ಚೆನ್ನಾಗಿತ್ತು. ಮಂಡಿ ನಿರ್ಮಾಣವಾದ ಬಳಿಕ ಒಂದೊಂದೇ ಸಮಸ್ಯೆ ಶುರುವಾಯಿತು. ಕಳೆದ ಮಳೆಗಾಲದ ಬಳಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಮನೆಗಾಗಿ ಮಾಡಿರುವ ಸಾಲದ ಕಂತನ್ನು ಈಗಲೂ ಕಟ್ಟುತ್ತಿರುವೆ. ಮುಂದೇನು ಮಾಡಬೇಕು ಎಂದು ತೋಚುತ್ತಿಲ್ಲ. ಇಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯ ಆಡಳಿತದ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ತಜ್ಞರು ಪರಿಶೀಲನೆ ನಡೆಸಲಿದ್ದಾರೆ ಎಂದು ದಿನವೂ ಕಥೆ ಹೇಳುತ್ತಿದ್ದಾರೆ. ತಜ್ಞರು ಪರಿಶೀಲನೆ ನಡೆಸಿ ವರದಿ ನೀಡುವ ಹೊತ್ತಿಗೆ ನಾವೆಲ್ಲ ಸಮಾಧಿ ಆಗಿರುತ್ತೇವೆ ಅಷ್ಟೇ’ ಎಂದು ಕೋಪದಿಂದ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.