ಲಖನೌ: ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ವಿರುದ್ಧ ಆಕ್ಷೇಪಾರ್ಹ ಮತ್ತು ಅಸಭ್ಯ ಫೇಸ್‌ಬುಕ್ ಪೋಸ್ಟ್ ಹಾಕಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಪತ್ರಕರ್ತ ಮತ್ತು ಇತರ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 15ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚಂಪತ್ ರಾಯ್ ಅವರ ಸಹೋದರ ಎಂದು ಹೇಳಲಾದ ಬಿಜ್ನೋರ್ ನಿವಾಸಿ ಸಂಜಯ್ ಬನ್ಸಾಲ್ ಅವರ ದೂರಿನ ಮೇರೆಗೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ನಾಗಿನಾ ಪೊಲೀಸ್ ಠಾಣೆ ಅಧಿಕಾರಿ ಕೃಷ್ಣ ಮುರಾರಿ ದೋಹ್ರೆ ಹೇಳಿದ್ದಾರೆ. ಎಫ್‌ಐಆರ್‌ನಲ್ಲಿ ಪತ್ರಕರ್ತ ವಿನೀತ್ ನರೈನ್, ಅಲ್ಕಾ ಲಾಹೋತಿ ಮತ್ತು ರಜನೀಶ್ ಎಂಬ ಮೂವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಬಿಜ್ನೋರ್ ಪೊಲೀಸ್ ವರಿಷ್ಠಾಧಿಕಾರಿ ಧರ್ಮವೀರ್ ಸಿಂಗ್ ಹೇಳಿದ್ದಾರೆ. ಈ ಕುರಿತು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ವಿರುದ್ಧ ವಿನೀತ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಲವಾರು ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಅಂಶಗಳನ್ನು ಉಲ್ಲೇಖಿಸಿದ್ದರು ಎಂದು ಬನ್ಸಾಲ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ವಿನೀತ್ ಅವರ ಫೇಸ್‌ಬುಕ್ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಬನ್ಸಾಲ್ ಅವರು ತಮ್ಮ ದೂರಿನೊಂದಿಗೆ ಸೇರಿಸಿ ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಬಿಜ್ನೋರ್ ಜಿಲ್ಲೆಯಲ್ಲಿ ಅಲ್ಕಾ ಅವರ ಒಡೆತನದಲ್ಲಿದ್ದ ಸುಮಾರು 20,000 ಚದರ ಮೀಟರ್ ಭೂಮಿಯನ್ನು ಚಂಪತ್ ರಾಯ್ ತನ್ನ ಸೋದರರ ನೆರವಿನೊಂದಿಗೆ ಕಬಳಿಸಿದ್ದಾರೆ ಎಂದು ವಿನೀತ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಪ್ರಕಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.