ADVERTISEMENT

ಮಹಾರಾಷ್ಟ್ರ | ಅತ್ಯಾಚಾರ ಪ್ರಕರಣ ವರದಿ ಮಾಡಿದ ಪತ್ರಕರ್ತನಿಗೆ ಥಳಿತ

ಪಿಟಿಐ
Published 10 ಆಗಸ್ಟ್ 2023, 11:40 IST
Last Updated 10 ಆಗಸ್ಟ್ 2023, 11:40 IST
ಪತ್ರಕರ್ತ ಸಂದೀಪ್‌ ಮಹಾಜನ್ ಮೇಲೆ ಥಳಿತ (Twitter/@Kumar_Ankit03)
ಪತ್ರಕರ್ತ ಸಂದೀಪ್‌ ಮಹಾಜನ್ ಮೇಲೆ ಥಳಿತ (Twitter/@Kumar_Ankit03)   

ಮುಂಬೈ: ಬಾಲಕಿ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದ ಪ್ರಕರಣ ವರದಿ ಮಾಡಿದ್ದ ಸ್ಥಳೀಯ ಪತ್ರಕರ್ತ ಸಂದೀಪ್‌ ಮಹಾಜನ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್‌ ಜಿಲ್ಲೆಯ ಪಚೋರಾದಲ್ಲಿ ನಡೆದಿದೆ.

ಪತ್ರಕರ್ತನನ್ನು ಥಳಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಸೇರಿದಂತೆ ವಿಪಕ್ಷಗಳು ಏಕನಾಥ್‌ ಶಿಂದೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಗೂಂಡಾಗಿರಿ ಮಾಡುವವರ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಪತ್ರಕರ್ತನ ಮೇಲಿನ ದಾಳಿ ಖಂಡಿಸಿರುವ ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಸಂಸದ ಸಂಜಯ್ ರಾವುತ್‌, ಈ ಗೂಂಡಾಗಳ ಹಿಂದೆ ಪಚೋರಾದ ಶಿವಸೇನಾ(ಏಕನಾಥ ಶಿಂದೆ ಬಣ) ಶಾಸಕ ಕಿಶೋರ್ ಪಾಟೀಲ್‌ ಇದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ಜಲಗಾಂವ್‌ ಜಿಲ್ಲೆಯ ಪಚೋರಾದಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಸಂದೀಪ್‌ ಮಹಾಜನ್‌ ವಿಸ್ಕೃತ ವರದಿ ಮಾಡಿದ್ದರು. ಘಟನೆ ಕುರಿತಂತೆ ಮುಖ್ಯಮಂತ್ರಿ ಏಕನಾಥ್‌ ಶಿಂದೆ ಅವರನ್ನು ಕಟುವಾಗಿ ಟೀಕಿಸಿಯೂ ಇದ್ದರು.

ಇತ್ತೀಚೆಗೆ ಆಡಿಯೊ ಕ್ಲಿಪ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಆಡಿಯೊದಲ್ಲಿ ಶಾಸಕ ಕಿಶೋರ್ ಪಾಟೀಲ್‌ ಪತ್ರಕರ್ತ ಸಂದೀಪ್‌ ಅವರನ್ನು ನಿಂದಿಸಿದ್ದಾರೆ ಎನ್ನಲಾಗಿತ್ತು.

ಪತ್ರಕರ್ತನ ಮೇಲಿನ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿಶೋರ್ ಪಾಟೀಲ್‌, ‘ಪತ್ರಕರ್ತ ಮಹಾಜನ್ ಅವರನ್ನು ನಿಂದಿಸಿರುವುದಕ್ಕೆ ನನ್ನಲ್ಲಿ ಬಲವಾದ ಕಾರಣಗಳಿದ್ದವು. ಆದರೆ ಇಂದು ನಡೆದಿರುವ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಘಟನೆ ನಡೆದಾಗ ನಾನು ಮುಂಬೈಯಲ್ಲಿದ್ದೆ. ಈ ದಾಳಿಯನ್ನು ನಾನು ಬೆಂಬಲಿಸುವುದಿಲ್ಲ‘ ಎಂದು ಹೇಳಿದ್ದಾರೆ.

ಪತ್ರಕರ್ತ ಮಹಾಜನ್ ನೀಡಿದ ದೂರಿನನ್ವಯ ಪಚೋರಾ ಪೊಲೀಸರು ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್‌ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಕ್ರಿಮಿನಲ್ ಬೆದರಿಕೆ) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.