ADVERTISEMENT

ಚುನಾವಣೆಗೆ ನಿಲ್ಲಲು ನ್ಯಾಯಮೂರ್ತಿಗಳು ರಾಜೀನಾಮೆ ನೀಡುವುದು ಸರಿಯಲ್ಲ: ನ್ಯಾ.ಗವಾಯಿ

ಪಿಟಿಐ
Published 20 ಅಕ್ಟೋಬರ್ 2024, 14:25 IST
Last Updated 20 ಅಕ್ಟೋಬರ್ 2024, 14:25 IST
ನ್ಯಾಯಮೂರ್ತಿ ಬಿ.ಆರ್‌. ಗವಾಯಿ
ನ್ಯಾಯಮೂರ್ತಿ ಬಿ.ಆರ್‌. ಗವಾಯಿ   

ಅಹಮದಾಬಾದ್: ನ್ಯಾಯಮೂರ್ತಿಗಳು ಚುನಾವಣೆಗಳಿಗೆ ಸ್ಪರ್ಧಿಸಲು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು ಅವರ ನಿಷ್ಪಕ್ಷಪಾತ ನಡೆಯ ಬಗ್ಗೆ ಇರುವ ಸಾರ್ವಜನಿಕ ನಂಬಿಕೆ ಮೇಲೂ ಪರಿಣಾಮ ಬೀರಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅಭಿಪ್ರಾಯಪಟ್ಟಿದ್ದಾರೆ.

ಗುಜರಾತ್‌ನ ನ್ಯಾಯಮೂರ್ತಿಗಳ ವಾರ್ಷಿಕ ಸಮ್ಮೇಳನವನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ನ್ಯಾಯಾಂಗದ ಮೌಲ್ಯಗಳು ಮತ್ತು ನ್ಯಾಯಪರತೆಯು ಕಾನೂನು ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯುವ ಮೂಲಭೂತ ಸ್ತಂಭಗಳಾಗಿವೆ ಎಂದೂ ಹೇಳಿದ್ದಾರೆ.

‘ನ್ಯಾಯಮೂರ್ತಿಗಳು ಪೀಠದಲ್ಲಿರುವಾಗ ಮತ್ತು ಪೀಠದ ಹೊರಗೆ ಇರುವಾಗಲೂ ನ್ಯಾಯಾಂಗದ ನೀತಿ ನಿಯಮಗಳ ಅತ್ಯುನ್ನತ ಮಾನದಂಡಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ನ್ಯಾಯಮೂರ್ತಿಗಳು ತಮ್ಮ ಕಚೇರಿ ಅಥವಾ ಹೊರಗಡೆ ರಾಜಕಾರಣಿ ಅಥವಾ ಅಧಿಕಾರಿಯನ್ನು ಹೊಗಳಿದರೆ ಅದು ನ್ಯಾಯಾಂಗದಲ್ಲಿ ಸಾರ್ವಜನಿಕರಿಗೆ ಇರುವ ನಂಬಿಕೆಯ ಮೇಲೆ ಪರಿಣಾಮ ಬೀರಬಹುದು’ ಎಂದು ಅವರು ಒತ್ತಿ ಹೇಳಿದ್ದಾರೆ. 

ADVERTISEMENT

‘ಉದಾಹರಣೆಗೆ, ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯನ್ನು ಟೀಕಿಸಿ ನೀಡಿದ ಹೇಳಿಕೆಗಾಗಿ ಅಮೆರಿಕದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಕ್ಷಮೆಯಾಚಿಸಬೇಕಾಯಿತು. ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ನ್ಯಾಯಮೂರ್ತಿ ತಮ್ಮ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡಿದರೆ ಅದು ಅವರ ನಿಷ್ಪಕ್ಷಪಾತತೆ ಬಗ್ಗೆ ಇದ್ದ ಸಾರ್ವಜನಿಕ ಗ್ರಹಿಕೆ ಮೇಲೂ ಪರಿಣಾಮ ಬೀರಬಹುದು’ ನ್ಯಾಯಮೂರ್ತಿ ಗವಾಯಿ ಹೇಳಿದ್ದಾರೆ. 

ನಿರ್ದಿಷ್ಟ ಪ್ರಕರಣಗಳ ವ್ಯಾಪ್ತಿಯ ಆಚೆಗೆ, ವಿಶೇಷವಾಗಿ ಲಿಂಗ, ಧರ್ಮ, ಜಾತಿ ಮತ್ತು ರಾಜಕೀಯ ಮುಂತಾದ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳು ವ್ಯಾಪಕ ಹೇಳಿಕೆಗಳನ್ನು ನೀಡುವುದು ಕಳವಳಕಾರಿ ಸಂಗತಿಯಾಗಿದೆ ಎಂದೂ ಅವರು ಹೇಳಿದ್ದಾರೆ.

‘ನ್ಯಾಯಾಂಗ ಸ್ವತಂತ್ರವಾಗಿರಬೇಕು’

‘ನ್ಯಾಯಾಂಗ ಸಂಸ್ಥೆಗಳ ಮೇಲಿನ ವಿಶ್ವಾಸಾರ್ಹತೆ ಕ್ಷೀಣಿಸುವಿಕೆ ಮತ್ತು ಸತ್ಯದ ಅವನತಿ ತಡೆಯುವ ಮಾರ್ಗಗಳು ಮತ್ತು ವಿಧಾನಗಳು’ ವಿಷಯದ ಕುರಿತು ಮಾತನಾಡಿದ ನ್ಯಾ.ಗವಾಯಿ, ನ್ಯಾಯಾಂಗವು ಕಾರ್ಯಾಂಗ ಮತ್ತು ಶಾಸಕಾಂಗದಿಂದ ಸ್ವತಂತ್ರವಾಗಿ ಇರಬೇಕು. ರಾಜಕೀಯ ಹಸ್ತಕ್ಷೇಪ, ಶಾಸಕಾಂಗದ ಅತಿಕ್ರಮಣ ಅಥವಾ ಕಾರ್ಯಾಂಗದ ಹಸ್ತಕ್ಷೇಪದ ಮೂಲಕ ನ್ಯಾಯಾಂಗದ ಮೇಲಿನ  ಅತಿಕ್ರಮಣವು ನಿಷ್ಪಕ್ಷಪಾತ ನ್ಯಾಯದ ಪರಿಕಲ್ಪನೆಯನ್ನು ದುರ್ಬಲಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.