ADVERTISEMENT

World's Hottest Day: ಜುಲೈ 21 ಅತ್ಯಧಿಕ ತಾಪಮಾನದ ದಿನ

84 ವರ್ಷಗಳಲ್ಲಿಯೇ ಗರಿಷ್ಠ ಸರಾಸರಿ ಉಷ್ಣಾಂಶ ದಾಖಲು

ಪಿಟಿಐ
Published 24 ಜುಲೈ 2024, 13:54 IST
Last Updated 24 ಜುಲೈ 2024, 13:54 IST
   

ನವದೆಹಲಿ: ಜುಲೈ 21 ಅಧಿಕ ತಾಪಮಾನ ದಾಖಲಾದ ದಿನವಾಗಿದೆ. ಅಂದು, ಭೂಮಿಯ ಮೇಲ್ಮೈನ ಸರಾಸರಿ ತಾಪಮಾನವು ದಾಖಲೆಯ ಗರಿಷ್ಠ 17.09 ಡಿಗ್ರಿ ಸೆಲ್ಸಿಯಸ್‌ ಇತ್ತು. ಇದು, ಕಳೆದ 84 ವರ್ಷಗಳಲ್ಲಿಯೇ ಅತ್ಯಧಿಕ ತಾಪಮಾನದ ದಿನವಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಐರೋಪ್ಯ ಒಕ್ಕೂಟದ ‘ಕೋಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವೀಸ್‌‘ (ಸಿ3ಎಸ್‌) ಸಂಸ್ಥೆಯ ವಿಜ್ಞಾನಿಗಳು ಕಳೆದ ವರ್ಷ ಜೂನ್‌ನಿಂದ ತಾಪಮಾನ ಕುರಿತು ದಾಖಲಿಸಿರುವ ದತ್ತಾಂಶಗಳನ್ನು ವಿಶ್ಲೇಷಿಸಿದ್ದಾರೆ.

ಜುಲೈ 21ರಂದು ಭೂಮಿಯ ಮೇಲ್ಮೈನ ತಾಪಮಾನವು ಸರಾಸರಿಗಿಂತ 1.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ಇದ್ದದ್ದು ಕಂಡು ಬಂದಿದೆ ಎಂದು ಸಿ2ಎಸ್‌ನ ನಿರ್ದೇಶಕ ಕಾರ್ಲೊ ಬ್ಯೂಂಟೆಂಪೊ ಹೇಳಿದ್ದಾರೆ.

ADVERTISEMENT

‘ನಾವೆಲ್ಲರೂ ವಿಚಿತ್ರ ಪರಿಸ್ಥಿತಿಯಲ್ಲಿ ಇದ್ದೇವೆ. ಭೂಮಿಯ ವಾತಾವರಣ ಬಿಸಿಯಾಗುವುದು ಮುಂದುವರಿಯುತ್ತಿದೆ. ಹಾಗಾಗಿ, ಬರುವ ತಿಂಗಳು– ವರ್ಷಗಳಲ್ಲಿ ತಾಪಮಾನವು ಹೊಸ ಮಟ್ಟದ ದಾಖಲೆ ತಲುಪುವುದನ್ನು ನಾವು ನೋಡಲಿದ್ದೇವೆ’ ಎಂದು ಎಚ್ಚರಿಸಿದ್ದಾರೆ.

ಅಧ್ಯಯನದ ಪ್ರಮುಖಾಂಶಗಳು

* ಹಿಂದಿನ ವರ್ಷಗಳಿಗೆ ಹೋಲಿಸಿದಾಗ, 2023 ಹಾಗೂ 2024ರಲ್ಲಿ ಸರಾಸರಿ ದಿನದ ತಾಪಮಾನವು ಗಮನಾರ್ಹವಾಗಿ ಗರಿಷ್ಠ ಮಟ್ಟದಲ್ಲಿ ಇತ್ತು

*  ಸರಾಸರಿ ಜಾಗತಿಕ ತಾಪಮಾನವು ಸಾಮಾನ್ಯವಾಗಿ ಜೂನ್‌ ನಂತರ ಹಾಗೂ ಆಗಸ್ಟ್‌ ಆರಂಭದಲ್ಲಿ ಕಂಡುಬರುತ್ತದೆ. ಉತ್ತರ ಗೋಳಾರ್ಧದಲ್ಲಿನ ಬೇಸಿಗೆ ಇದಕ್ಕೆ ಕಾರಣ

* ದಕ್ಷಿಣ ಗೋಳಾರ್ಧದಲ್ಲಿನ ಸಾಗರಗಳ ತಾಪಮಾನ ಕಡಿಮೆಯಾಗುವುದಕ್ಕಿಂತಲೂ ವೇಗವಾಗಿ ಉತ್ತರ ಗೋಳಾರ್ಧದ ಮೇಲ್ಮೈನ ತಾಪಮಾನ ಹೆಚ್ಚಳವಾಗುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.