ADVERTISEMENT

ಕೋಲ್ಕತ್ತ ವೈದ್ಯ ವಿದ್ಯಾರ್ಥಿನಿ ಕೊಲೆ: ಕಿರಿಯ ವೈದ್ಯರು ಸೇರಿ ಹಲವರಿಗೆ ಸಮನ್ಸ್

ಪಿಟಿಐ
Published 13 ಆಗಸ್ಟ್ 2024, 6:21 IST
Last Updated 13 ಆಗಸ್ಟ್ 2024, 6:21 IST
   

ಕೋಲ್ಕತ್ತ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿರುವ ವ್ಯಕ್ತಿಗಳ ಪೈಕಿ 4 ಮಂದಿ ಕಿರಿಯ ವೈದ್ಯರೂ ಸೇರಿದ್ದಾರೆ.

ಸರ್ಕಾರಿ ಆರ್‌.ಜೆ. ಕರ್ ವೈದ್ಯಕೀಯ ಆಸ್ಪತ್ರೆಯಲ್ಲಿ ಕಳೆದ ವಾರ 2ನೇ ವರ್ಷದ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಲಾಗಿತ್ತು.

ಲಾಲ್‌ ಬಜಾರ್‌ನ ಕೋಲ್ಕತ್ತ ಪೊಲೀಸ್ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಆರ್‌.ಜೆ. ಕರ್ ಆಸ್ಪತ್ರೆಯ ನಾಲ್ವರು ಕಿರಿಯ ವೈದ್ಯರಿಗೆ ಸಮನ್ಸ್ ನೀಡಲಾಗಿದೆ.

ADVERTISEMENT

ಈ ನಾಲ್ವರು ಮೃತ ವಿದ್ಯಾರ್ಥಿನಿ ಜೊತೆ ಅಂದು ರಾತ್ರಿ ಊಟಕ್ಕೆ ತೆರಳಿದ್ದರು. ಹಾಗಾಗಿ, ಆರೋಪಿ ಪತ್ತೆಗೆ ವಿಚಾರಣೆಗೆ ಸಮನ್ಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವೈದ್ಯಕೀಯ ವಿಭಾಗದ ಮುಖ್ಯಸ್ಥ, ನರ್ಸ್‌ಗಳು, ಭದ್ರತಾ ಸಿಬ್ಬಂದಿ, ಇತರೆ ಸಿಬ್ಬಂದಿಯನ್ನೂ ವಿಚಾರಣೆಗೆ ಕರೆಯಲಾಗಿದೆ.

ಅತ್ಯಾಚಾರ ಮತ್ತು ಕೊಲೆಯಾದ ವಿದ್ಯಾರ್ಥಿನಿಯ ಮೃತದೇಹ ಆಗಸ್ಟ್ 9ರಂದು ಆರ್‌.ಜೆ. ಕರ್ ಆಸ್ಪತ್ರೆಯಲ್ಲಿ ಪತ್ತೆಯಾಗಿತ್ತು. ಬಳಿಕ, ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ರಾಜ್ಯಗಳ ಆಸ್ಪತ್ರೆಗಳ ವೈದ್ಯರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

‘ವಿದ್ಯಾರ್ಥಿನಿಯ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಶೀಘ್ರ ಬಂಧಿಸಬೇಕು. ಈ ಕಾರ್ಯವನ್ನು ಅವರು ಭಾನುವಾರದೊಳಗೆ ಮಾಡದಿದ್ದರೆ, ಪ್ರಕರಣವನ್ನು ಸಿಬಿಐಗೆ ವಹಿಸುತ್ತೇನೆ. ಸಿಬಿಐನ ಯಶಸ್ಸಿನ ಪ್ರಮಾಣವೂ ಕಡಿಮೆ ಇದೆ ಎಂಬುದು ಗೊತ್ತಿದೆ. ಅದು ಪ್ರತಿಷ್ಠಿತ ವ್ಯಕ್ತಿಗಳ ಪ್ರಕರಣಗಳನ್ನೇ ಭೇದಿಸಿಲ್ಲ. ಹೀಗಿದ್ದರೂ, ಈ ಪ್ರಕರಣವನ್ನು ಸಿಬಿಐಗೆ ವಹಿಸಲು ನನಗೆ ಯಾವುದೇ ಅಭ್ಯಂತರವಿಲ್ಲ’ ಎಂದು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.