ADVERTISEMENT

ನ್ಯಾ. ಹೇಮಾ ಸಮಿತಿ ವರದಿ: ಪ್ರಕರಣಗಳ ವಿಚಾರಣೆಗೆ ವಿಶೇಷ ಪೀಠ –ಕೇರಳ ಹೈಕೋರ್ಟ್

ಪಿಟಿಐ
Published 5 ಸೆಪ್ಟೆಂಬರ್ 2024, 10:48 IST
Last Updated 5 ಸೆಪ್ಟೆಂಬರ್ 2024, 10:48 IST
ಕೇರಳ ಹೈಕೋರ್ಟ್
ಕೇರಳ ಹೈಕೋರ್ಟ್   

ಕೊಚ್ಚಿ: ನ್ಯಾಯಮೂರ್ತಿ ಹೇಮಾ ಸಮಿತಿ ವರದಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಐವರು ನ್ಯಾಯಮೂರ್ತಿಗಳನ್ನೊಳಗೊಂಡ ವಿಶೇಷ ಪೀಠ ರಚಿಸುವುದಾಗಿ ಕೇರಳ ಹೈಕೋರ್ಟ್‌ ಗುರುವಾರ ಹೇಳಿದೆ.

ನ್ಯಾ. ಹೇಮಾ ಸಮಿತಿಯ ವರದಿ ಪ್ರಕಟಕ್ಕೆ ಅನುಮತಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ. ಮುಹಮ್ಮದ್‌ ಮುಸ್ತಾಕ್ ಮತ್ತು ನ್ಯಾಯಮೂರ್ತಿ ಎಸ್‌. ಮನು ಅವರಿದ್ದ ಪೀಠವು ಈ ನಿರ್ಧಾರ ಪ್ರಕಟಿಸಿದೆ.

ನ್ಯಾ. ಹೇಮಾ ಸಮಿತಿಯ ಸಂಶೋಧನೆ ಮತ್ತು ಶಿಫಾರಸುಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ರಾಜ್ಯ ಮಾಹಿತಿ ಆಯೋಗ ಅವಕಾಶ ಕಲ್ಪಿಸಿತ್ತು. ಇದನ್ನು ಪ್ರಶ್ನಿಸಿ ಸಿನಿಮಾ ನಿರ್ಮಾಪಕ ಸಾಜಿಮನ್‌ ಪರಾಯಿಲ್‌ ಅವರು ಜುಲೈ 5ರಂದು ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿದ್ದ ಏಕ ಸದಸ್ಯ ಪೀಠ, ಸಮಿತಿಯ ವರದಿಯನ್ನು ಪ್ರಕಟಿಸಲು ಆಗಸ್ಟ್‌ 13ರಂದು ಅನುಮತಿಸಿತ್ತು.

ADVERTISEMENT

ಸಾಜಿಮನ್‌ ಅವರು ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎ. ಮುಹಮ್ಮದ್‌ ನೇತೃತ್ವದ ವಿಭಾಗೀಯ ಪೀಠದ ಮೆಟ್ಟಿಲೇರಿದ್ದರು.

2017ರಲ್ಲಿ ನಟಿಯೊಬ್ಬರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ನಟ ದಿಲೀಪ್‌ ಹೆಸರು ಕೇಳಿ ಬಂದಿತ್ತು. ಹೀಗಾಗಿ, ಮಲಯಾಳ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು, ಲೈಂಗಿಕ ದೌರ್ಜನ್ಯ ಮತ್ತು ಲಿಂಗ ಸಮಾನತೆ ಕುರಿತ ಅಧ್ಯಯನಕ್ಕೆ ಕೇರಳ ಸರ್ಕಾರ 2019ರಲ್ಲಿ ಸಮಿತಿ ರಚಿಸಿತ್ತು.

ವರದಿ ಬಹಿರಂಗವಾದ ಬೆನ್ನಲ್ಲೇ, ಹಲವು ನಟರು, ನಿರ್ದೇಶಕರು, ನಿರ್ಮಾಪಕರ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈ ಕುರಿತ ತನಿಖೆಗೆ ಕೇರಳ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.