ನವದೆಹಲಿ: ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್‌ನ 51ನೆಯ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ಸಂಜೀವ್ ಖನ್ನಾ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಖನ್ನಾ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನ್ಯಾಯಮೂರ್ತಿ ಖನ್ನಾ ಅವರು ಇಂಗ್ಲಿಷ್ ಭಾಷೆಯಲ್ಲಿ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನ್ಯಾಯಮೂರ್ತಿ ಖನ್ನಾ ಅವರು 2025ರ ಮೇ 13ರಂದು ಸಿಜೆಐ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ.
ಬಡ್ತಿ ಸಂದರ್ಭದ ವಿವಾದ: ಖನ್ನಾ ಅವರಿಗೆ 2019ರ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಯಾಗಿ ಬಡ್ತಿ ನೀಡುವ ಸಂದರ್ಭದಲ್ಲಿ ಭಾರಿ ವಿವಾದ ಸೃಷ್ಟಿಯಾಗಿತ್ತು. ನ್ಯಾಯಮೂರ್ತಿ ಖನ್ನಾ ಅವರಿಗೆ ಬಡ್ತಿ ನೀಡುವಾಗ ಇತರ ಹಲವು ನ್ಯಾಯಮೂರ್ತಿ ಗಳ ಸೇವಾ ಹಿರಿತನವನ್ನು ಕಡೆ ಗಣಿಸಲಾಗಿದೆ ಎಂಬುದು ವಿವಾದದ ಮೂಲವಾಗಿತ್ತು. ಆದರೆ ಈ ವಿವಾದಕ್ಕೆ ಸೊಪ್ಪು ಹಾಕದ ಕೇಂದ್ರವು, ಸುಪ್ರೀಂ ಕೋರ್ಟ್‌ನ ಕೊಲಿಜಿಯಂ (ಹಿರಿಯ ನ್ಯಾಯಮೂರ್ತಿಗಳ ಸಮಿತಿ) ಶಿಫಾರಸಿಗೆ ಅನುಗುಣವಾಗಿ ನ್ಯಾಯಮೂರ್ತಿ ಖನ್ನಾ ಅವರಿಗೆ ಬಡ್ತಿ ನೀಡಿತು.
ಆ ಸಂದರ್ಭದಲ್ಲಿ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ನ್ಯಾಯ ಮೂರ್ತಿ ಖನ್ನಾ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಕ ಮಾಡಿದ್ದನ್ನು ‘ಸ್ವೇಚ್ಛೆಯ ಕ್ರಮ’ ಎಂದು ಟೀಕಿಸಿತ್ತು. ಈ ನೇಮಕದಿಂದಾಗಿ, ಸೇವಾ ಹಿರಿತನ ಕಡೆಗಣನೆಗೆ ಒಳಗಾದ ನ್ಯಾಯ ಮೂರ್ತಿಗಳಿಗೆ ಅವಮಾನ ಆಗುತ್ತದೆ, ಅವರ ನೈತಿಕ ಸ್ಥೈರ್ಯ ಕುಸಿಯುತ್ತದೆ ಎಂದು ಕೂಡ ಅದು ಹೇಳಿತ್ತು.
ಕೊಲಿಜಿಯಂ ತೀರ್ಮಾನವನ್ನು ವಕೀಲರು ಹಾಗೂ ದೇಶದ ಜನಸಾಮಾನ್ಯರು ‘ನ್ಯಾಯಸಮ್ಮತ ವಲ್ಲದ, ಸೂಕ್ತವಲ್ಲದ’ ಕ್ರಮ ಎಂಬುದಾಗಿ ಪರಿಗಣಿಸುತ್ತಾರೆ ಎಂದು ಬಿಸಿಐ ಅಭಿಪ್ರಾಯ ವ್ಯಕ್ತಪಡಿಸಿತ್ತು. ಹಲವು ಹಿರಿಯ ನ್ಯಾಯಮೂರ್ತಿಗಳ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಸೇವಾ ಹಿರಿತನ ಬದಿಗೆ ಸರಿಸುವುದನ್ನು ಜನರು ಸಹಿಸುವುದಿಲ್ಲ ಎಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ಆಗ ಹೇಳಿದ್ದರು.
‘ನಮಗೆ ನ್ಯಾಯಮೂರ್ತಿ ಖನ್ನಾ ಅವರ ಬಗ್ಗೆ ದೂರು ಇಲ್ಲ. ಅವರು ತಮ್ಮ ಸರದಿ ಬರುವವರೆಗೆ ಕಾಯಬಹುದು. ಆದರೆ, ಹಲವು ಮುಖ್ಯ ನ್ಯಾಯಮೂರ್ತಿ ಗಳು ಹಾಗೂ ನ್ಯಾಯಮೂರ್ತಿಗಳ ಅರ್ಹತೆ ಮತ್ತು ಹಿರಿತನವನ್ನು ಕಡೆಗಿಸಿ, ಇವರಿಗೆ ಬಡ್ತಿ ನೀಡುವ ಅವಸರದ ಅಗತ್ಯವಿಲ್ಲ’ ಎಂದು ಬಿಸಿಐ ಹೇಳಿತ್ತು.
ರಾಜಸ್ಥಾನ ಮತ್ತು ದೆಹಲಿ ಹೈಕೋರ್ಟ್‌ಗಳ ಮುಖ್ಯ ನ್ಯಾಯ ಮೂರ್ತಿಗಳ ಹಿರಿತನವನ್ನು ಕಡೆಗಣಿ ಸಿದ್ದಕ್ಕಾಗಿ ಆಗ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಆಗಿದ್ದ ಎಸ್.ಕೆ. ಕೌಲ್ ಅವರು ಆಗಿನ ಸಿಜೆಐ ರಂಜನ್ ಗೊಗೊಯಿ ಹಾಗೂ ಕೊಲಿಜಿಯಂ ಸದಸ್ಯರಿಗೆ ಪತ್ರವೊಂದನ್ನು ಬರೆದಿದ್ದರು.
ನ್ಯಾಯಮೂರ್ತಿ ಖನ್ನಾ ಅವರಿಗಿಂತ ಹೆಚ್ಚಿನ ಸೇವಾ ಹಿರಿತನ ಹೊಂದಿರುವ ಈ ಇಬ್ಬರು ಮುಖ್ಯ ನ್ಯಾಯಮೂರ್ತಿ ಗಳಿಗೆ ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡದೆ ಇದ್ದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಅಭಿಪ್ರಾಯ ನ್ಯಾಯಮೂರ್ತಿ ಕೌಲ್ ಅವರದ್ದಾಗಿತ್ತು ಎಂದು ಆಗ ಮೂಲಗಳು ಹೇಳಿದ್ದವು.
ಮೋದಿ, ಖರ್ಗೆ ಅಭಿನಂದನೆ
ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರ ಹಲವು ಪ್ರಮುಖರು ಅಭಿನಂದಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮೋದಿ ಅವರೂ ಹಾಜರಿದ್ದರು. ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ಖನ್ನಾ ಅವರು ಸೋಮವಾರ ಮಧ್ಯಾಹ್ನದ ಕಲಾಪದಲ್ಲಿ ಭಾಗಿಯಾದರು. ಕಲಾಪದ ಸಂದರ್ಭದಲ್ಲಿ ಹಾಜರಿದ್ದ ವಕೀಲರಿಗೆ ಅವರು ಧನ್ಯವಾದ ಅರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.