ADVERTISEMENT

ಸಿಜೆಐ ಆಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಪ್ರಮಾಣ ಇಂದು

ಪಿಟಿಐ
Published 10 ನವೆಂಬರ್ 2024, 23:30 IST
Last Updated 10 ನವೆಂಬರ್ 2024, 23:30 IST
<div class="paragraphs"><p>ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್</p></div>

ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್

   

–ಪಿಟಿಐ ಚಿತ್ರ

ನವದೆಹಲಿ: ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್‌ನ 51ನೆಯ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ADVERTISEMENT

ಚುನಾವಣಾ ಬಾಂಡ್‌ ಯೋಜನೆಯನ್ನು ರದ್ದುಪಡಿಸಿದ ತೀರ್ಪು, ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಕ್ರಮವನ್ನು ಎತ್ತಿಹಿಡಿದ ತೀರ್ಪು ಸೇರಿದಂತೆ ಸುಪ್ರೀಂ ಕೋರ್ಟ್‌ ನೀಡಿದ ಹಲವು ಮಹತ್ವದ ತೀರ್ಪುಗಳಲ್ಲಿ ಖನ್ನಾ ಅವರ ಪಾಲು ಕೂಡ ಇದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಖನ್ನಾ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಮಾಣ ವಚನ ಬೋಧಿಸಲಿದ್ದಾರೆ. ಡಿ.ವೈ. ಚಂದ್ರಚೂಡ್ ಅವರು ಸಿಜೆಐ ಹುದ್ದೆಯಿಂದ ಭಾನುವಾರ ನಿವೃತ್ತರಾಗಿದ್ದಾರೆ. ಖನ್ನಾ ಅವರು 2025ರ ಮೇ 13ರವರೆಗೆ ಸಿಜೆಐ ಆಗಿರಲಿದ್ದಾರೆ.

ಖನ್ನಾ ಅವರು 2019ರಿಂದ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಖನ್ನಾ ಅವರು ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ದೇವರಾಜ್ ಖನ್ನಾ ಅವರ ಮಗ. ಅಷ್ಟೇ ಅಲ್ಲ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ಎಚ್.ಆರ್. ಖನ್ನಾ ಅವರ ಸಂಬಂಧಿ ಕೂಡ ಹೌದು. ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ ಆಗುವ ಮೊದಲು ವಕೀಲರಾಗಿದ್ದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಕಟವಾದ, ಕುಖ್ಯಾತ ಎಡಿಎಂ ಜಬಲ್ಪುರ ಪ್ರಕರಣದಲ್ಲಿ ಭಿನ್ನಮತದ ತೀರ್ಪು ಬರೆದ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರು, 1976ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಇದು ಆಗ ಭಾರಿ ಸುದ್ದಿಯಾಗಿತ್ತು.

ಎಡಿಎಂ ಜಬಲ್ಪುರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಬಹುಮತದ ತೀರ್ಪು, ದೇಶದ ನ್ಯಾಯಾಂಗದ ಇತಿಹಾಸದಲ್ಲಿ ‘ಕಪ್ಪು ಚುಕ್ಕೆ’ ಎಂದೇ ಪರಿಗಣಿತವಾಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಬಹುದು ಎಂಬುದನ್ನು ಕೋರ್ಟ್ ಬಹುಮತದ ತೀರ್ಪಿನಲ್ಲಿ ಎತ್ತಿಹಿಡಿದಿತ್ತು. ಆದರೆ ನ್ಯಾಯಮೂರ್ತಿ ಎಚ್.ಆರ್. ಖನ್ನಾ, ಈ ಪ್ರಕರಣದಲ್ಲಿ ಭಿನ್ನಮತದ ತೀರ್ಪು ನೀಡಿದ್ದರು.

ದೇಶದಲ್ಲಿ ಚುನಾವಣೆಗಳಲ್ಲಿ ಬಳಕೆಯಾಗುವ ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತಗಳ ದಾಖಲೆಯನ್ನು ತಿರುಚಲಾಗುತ್ತದೆ ಎಂಬ ಅನುಮಾನಕ್ಕೆ ಆಧಾರವಿಲ್ಲ, ಮತ್ತೆ ಮತಪತ್ರಗಳ ಬಳಕೆ ಜಾರಿಗೆ ಬರಬೇಕು ಎಂಬ ಕೋರಿಕೆಯನ್ನು ಒಪ್ಪಲಾಗದು ಎಂಬ ತೀರ್ಪು ನೀಡಿದ ಪೀಠದ ನೇತೃತ್ವವನ್ನು ನ್ಯಾಯಮೂರ್ತಿ ಸಂಜೀವ್ ಖನ್ನಾ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.