ನವದೆಹಲಿ: ಆತ 15 ವರ್ಷದ ಬಾಲಕ. ತಂದೆ ಪ್ರಸಿದ್ಧ ಶಸ್ತ್ರಚಿಕಿತ್ಸಕ. ತಂದೆಯ ಕಾರಿನಲ್ಲಿ ಸ್ನೇಹಿತರನ್ನು ಕೂರಿಸಿಕೊಂಡು ಕಾನ್ಪುರದ ಗಂಗಾ ಬ್ಯಾರೇಜ್ ಮೇಲೆ ಆತ 2023ರ ಅ. 26ರಂದು ಹೊರಟಿದ್ದ. ವೇಗದಲ್ಲಿದ್ದ ಕಾರು ಚಾಲಕನಾಗಿದ್ದ ಬಾಲಕನ ನಿಯಂತ್ರಣ ತಪ್ಪಿ ಇಬ್ಬರಿಗೆ ಗುದ್ದಿ ಗಾಯಗೊಳಿಸಿತ್ತು.
ಆದರೆ ಆ ಪ್ರಕರಣ ನಡೆದ ಏಳು ತಿಂಗಳು ಕಳೆದರೂ ಶಸ್ತ್ರಚಿಕಿತ್ಸಕರೊಬ್ಬರ ಮಗನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿಲ್ಲ. ವಶಕ್ಕೆ ಪಡೆಯಲಿಲ್ಲ ಅಥವಾ ಆಪ್ತ ಸಮಾಲೋಚನೆಯನ್ನೂ ನಡೆಸಿಲ್ಲ. ಅದೇ ಬಾಲಕ 2024ರ ಮಾರ್ಚ್ 31ರಂದು ಮತ್ತೊಂದು ಕಾರಿನಲ್ಲಿ ಮಗದೊಂದು ಅಪಘಾತ ನಡೆಸಿ, ನಾಲ್ವರನ್ನು ಗಾಯಗೊಳಿಸಿದ್ದ.
ಮೊದಲ ಪ್ರಕರಣವನ್ನು ಎಸಿಪಿ ದರ್ಜೆಯ ಅಧಿಕಾರಿ ಕಳೆದ 5 ತಿಂಗಳಿಂದ ತನಿಖೆ ನಡೆಸುತ್ತಿದ್ದಾರೆ. ಪುಣೆಯಲ್ಲಿ ನಡೆದ ಪೋಶೆ ಕಾರು ದುರಂತದಲ್ಲಿ 17 ವರ್ಷದ ಬಾಲಕ ಆರೋಪಿಯಾಗಿದ್ದಾನೆ. ಈ ಪ್ರಕರಣ ದೇಶದ ಗಮನ ಸೆಳೆಯುತ್ತಿದ್ದಂತೆ, ಕಾನ್ಪುರದ ಶಸ್ತ್ರಚಿಕಿತ್ಸಕರೊಬ್ಬರ ಮಗನ ಪ್ರಕರಣವೂ ಈಗ ಮುನ್ನೆಲೆಗೆ ಬಂದಿದೆ. ಪುಣೆ ಪ್ರಕರಣದಲ್ಲಿ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಕಾನ್ಪುರ ಬಾಲಕ ಎರಡು ಅಪಘಾತ ನಡೆಸಿರುವ ಆರೋಪವಿದ್ದರೂ, ತನಿಖೆ ಆಮೆಗತಿಯಲ್ಲಿ ಸಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಕಾನ್ಪುರ ನಗರ ಪೊಲೀಸ್ ಆಯುಕ್ತ ಅಖಿಲ್ ಕುಮಾರ್ ಅವರು 2023ರ ಪ್ರಕರಣದ ಮಾಹಿತಿ ನೀಡುವಂತೆ ತನಿಖಾಧಿಕಾರಿಗೆ ಸೂಚಿಸಿದ್ದಾರೆ. ಜತೆಗೆ ಏಳು ತಿಂಗಳಿಂದ ತನಿಖೆ ಏಕೆ ವಿಳಂಬವಾಗುತ್ತಿದೆ ಎಂದೂ ಕೇಳಿದ್ದಾರೆ. ತನಿಖೆ ವಿಳಂಬ ಮಾಡಿದ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಸೂಚನೆಯನ್ನೂ ನೀಡಿದ್ದಾರೆ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಕಾನ್ಪುರ ಬಾಲಕನ ಮೊದಲ ಪ್ರಕರಣ ದಾಖಲಾಗಿದ್ದು 2023ರ ಅ. 27ರಂದು. ನಿರ್ಲಕ್ಷದಿಂದಾಗಿ ಒಬ್ಬರ ಸಾವಿಗೆ ಕಾರಣ, ಅಜಾಗರೂಕತೆಯಿಂದ ವಾಹನ ಚಾಲನೆ, ಗಂಭೀರ ಸ್ವರೂಪದ ಗಾಯ ಮಾಡಿರುವ ಆರೋಪ ಹೊರಿಸಲಾಗಿದೆ. ಮಾರ್ಚ್‌ನಲ್ಲಿ ನಡೆದ 2ನೇ ಪ್ರಕರಣದಲ್ಲಿ ನಾಲ್ವರು ಗಾಯಗೊಂಡಿದ್ದು, ಪೊಲೀಸರು ನರಹತ್ಯೆ ಪ್ರಕರಣ ದಾಖಲಿಸಿದ್ದಾರೆ.
ತನಿಖೆ ವಿಳಂಬವಾಗಿದ್ದೇಕೆ ಎನ್ನುವ ಪ್ರಶ್ನೆಗೆ ಪೊಲೀಸರು ಹೇಳಿದ್ದು, ’ಅಪಘಾತ ಪ್ರಕರಣದಲ್ಲಿ ಗಾಯಗೊಂಡ ಕುಟುಂಬದವರು ರಾಜಿ ಮಾಡಿಕೊಳ್ಳಲು ಮುಂದಾಗಿದ್ದರು. ಜತೆಗೆ ಸಾಕ್ಷಿಯಾಗಿದ್ದ ರೈತನೊಬ್ಬ ತನ್ನ ಹೇಳಿಕೆ ತಿರುಚಿದ್ದು, ಕಾರಿನೊಳಗೆ ಚಾಲಕ ಇದ್ದಿದ್ದು ನನಗೆ ಬಾಲಕನಂತೆ ಕಂಡಿತು ಎಂದು ಹೇಳಿದ್ದರು’ ಎಂದಿದ್ದರು.
ಜತೆಗೆ ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಯೂ ಇಲ್ಲ. ಹೀಗಾಗಿ ಬಾಲಕ ಕಾರು ಚಾಲನೆ ಮಾಡಿದ ಎಂಬುದಕ್ಕೆ ಸಾಕ್ಷಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕಾನ್ಪುರ ಪ್ರಕರಣ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಹರೀಶ್ ಚಂದ್ರ, ‘ಎರಡೂ ಪ್ರಕರಣಗಳ ಗಾಯಾಳುಗಳ ಕುಟುಂಬದವರು ಅರ್ಜಿಗೆ ಸಹಿ ಹಾಕಿದ್ದಾರೆ. ಅಪಘಾತ ಸಂಭವಿಸಿದಾಗ ಬಾಲಕನೇ ಕಾರು ಓಡಿಸುತ್ತಿದ್ದ ಎಂದು ಇವರು ಖಚಿತಪಡಿಸಿದ್ದಾರೆ. ಅಪಘಾತಪಡಿಸಿದ ಕಾರು ಶಸ್ತ್ರಚಿಕಿತ್ಸಕರ ಕುಟುಂಬದ 70 ವರ್ಷದ ವೃದ್ಧರೊಬ್ಬರ ಹೆಸರಿನಲ್ಲಿ ನೋಂದಣಿಯಾಗಿದೆ’ ಎಂದಿದ್ದಾರೆ.
ಪುಣೆಯ ಪ್ರಕರಣದಲ್ಲೂ ಬಾಲಕನ ತಂದೆ ಗುರುವಾರ ಹೇಳಿಕೆಯೊಂದನ್ನು ನೀಡಿ, ಕಾರನ್ನು ಚಾಲಕನು ಓಡಿಸುತ್ತಿದ್ದ ಎಂಬ ಹೇಳಿಕೆ 2023ರ ಪ್ರಕರಣವನ್ನು ನೆನಪಿಸುವಂತಿದೆ.
ಭಾರತದಲ್ಲಿ ಮದ್ಯ ಸೇವನೆಗೆ ಕನಿಷ್ಠ ವಯಸ್ಸು ಬೇರೆ ಬೇರೆ ರಾಜ್ಯಗಳಲ್ಲಿ ಬಿನ್ನವಾಗಿದೆ. ಆದರೆ ಇದು 18ರಿಂದ 25ವರ್ಷದೊಳಗೆ ಇದೆ. 1988ರ ಮೋಟಾರು ವಾಹನ ಕಾಯ್ದೆಯು 2019ರಲ್ಲಿ ತಿದ್ದುಪಡಿಯಾಗಿದ್ದು, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಉಲ್ಲೇಖಿಸಲಾಗಿದೆ.
ವಾಹನ ಚಾಲನೆ ಮಾಡುವ ವ್ಯಕ್ತಿಯೊಬ್ಬರ ದೇಹದಲ್ಲಿನ 100 ಮಿ.ಲೀ. ರಕ್ತದಲ್ಲಿ 30 ಮಿಲಿ ಗ್ರಾಂ ಮದ್ಯ ಅಥವಾ ಮಾದಕ ದ್ರವ್ಯ ಪ್ರಮಾಣ ಪತ್ತೆಯಾದಲ್ಲಿ ಅದನ್ನು ಶಿಕ್ಷಾರ್ಹ ಅಪರಾಧವಾಗಿದೆ. ಇಂಥವರ ಚಾಲನಾ ಪರವಾನಗಿಯನ್ನು ಅಮಾನತು ಮಾಡಬಹುದು. ಇದೇ ಕೃತ್ಯ ಮುಂದುವರಿದಲ್ಲಿ ದುಬಾರಿ ದಂಡವನ್ನೂ ವಿಧಿಸಲು ಅವಕಾಶವಿದೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರಿಗೆ ಗರಿಷ್ಠ 6 ತಿಂಗಳ ಜೈಲು ಅಥವಾ ₹10 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಮುಂದುವರಿದಲ್ಲಿ, ಕೆಲ ಸಮಯಗಳವರೆಗೆ ಚಾಲನಾ ಪರವಾನಗಿಯನ್ನು ರದ್ದುಪಡಿಸುವ ಅವಕಾಶವೂ ಇದೆ.
ಒಂದು ಬಾರಿ ಶಿಕ್ಷೆಗೆ ಒಳಗಾಗಿ, ಮೂರು ವರ್ಷದೊಳಗೆ ಮತ್ತೊಂದು ಅಂಥದ್ದೇ ಕೃತ್ಯ ಎಸಗಿದರೆ, ಜೈಲು ಶಿಕ್ಷೆ 2 ವರ್ಷಗಳಿಗೆ ಹೆಚ್ಚಿಸಬಹುದಾಗಿದೆ ಅಥವಾ ದಂಡದ ಪ್ರಮಾಣ ₹15 ಸಾವಿರಕ್ಕೆ ಹೆಚ್ಚಿಸಬಹುದಾಗಿದೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಇತರರಿಗೆ ಗಾಯಪಡಿಸಿದರೆ 2 ವರ್ಷಗಳ ಜೈಲು ಶಿಕ್ಷೆ ಅಥವಾ ₹5 ಸಾವಿರ ದಂಡ ವಿಧಿಸಲು ಅವಕಾಶವಿದೆ. ವ್ಯಕ್ತಿ ಮೃತಪಟ್ಟರೆ 2ರಿಂದ 7 ವರ್ಷ ಜೈಲು ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
18 ವರ್ಷದೊಳಗಿನವರು ಮದ್ಯ ಸೇವಿಸಿ ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿದರೆ, ಅವರ ಪಾಲಕರನ್ನು ತಪ್ಪಿತಸ್ಥರು ಎಂದು ಕಾನೂನು ಪರಿಗಣಿಸುತ್ತದೆ. ಜತೆಗೆ ಬಾಲಾಪರಾಧಿಗೆ ಇತರ ರೀತಿಯ ದಂಡ ವಿಧಿಸಬಹುದಾಗಿದೆ.
ವಾಹನ ನೀಡಿದ ಅಪರಾಧದ ಮೇಲೆ ಪಾಲಕರನ್ನು 3 ವರ್ಷಗಳವರೆಗೆ ಜೈಲಿಗೆ ಕಳುಹಿಸುವ ಹಾಗೂ ₹25 ಸಾವಿರ ದಂಡ ವಿಧಿಸಬಹುದಾಗಿದೆ. ಅಪಘಾತಪಡಿಸಿದ ವಾಹನದ ನೋಂದಣಿಯನ್ನು 12 ತಿಂಗಳವರೆಗೆ ರದ್ದುಪಡಿಸುವ ಅವಕಾಶವೂ ಈ ಕಾಯ್ದೆಯಲ್ಲಿದೆ.
ನಂತರ ಕಲಿಕಾ ಪರವಾನಗಿ ಅಥವಾ ಚಾಲನಾ ಪರವಾನಗಿಗಾಗಿ 25 ವರ್ಷ ಆಗುವವರೆಗೂ ಅಪಘಾತಪಡಿಸಿದ ಬಾಲಕ/ ಬಾಲಕಿ ಕಾಯಬೇಕು.
2022ರಲ್ಲಿ ರಸ್ತೆ ಅಪಘಾತಗಳ ಪ್ರಮಾಣ 3,268ರಷ್ಟಾಗಿದೆ. ಇದರಲ್ಲಿ 1,503 ಜನ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.