ADVERTISEMENT

ತೃತೀ‌ಯ ರಂಗ ರಚನೆ: ಇಂದು ಮುಂಬೈಯಲ್ಲಿ ಠಾಕ್ರೆ, ಪವಾರ್‌ ಭೇಟಿಯಾಗಲಿರುವ ಕೆಸಿಆರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2022, 1:35 IST
Last Updated 20 ಫೆಬ್ರುವರಿ 2022, 1:35 IST
ಕೆ.ಚಂದ್ರಶೇಖರ ರಾವ್ ಮತ್ತು ಉದ್ಧವ್ ಠಾಕ್ರೆ
ಕೆ.ಚಂದ್ರಶೇಖರ ರಾವ್ ಮತ್ತು ಉದ್ಧವ್ ಠಾಕ್ರೆ   

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿಕೆ.ಚಂದ್ರಶೇಖರ ರಾವ್ (ಕೆಸಿಆರ್) ಅವರು ಇಂದು (ಭಾನುವಾರ) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾಗಲಿದ್ದಾರೆ.

ತೆಲುಗು ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಪಕ್ಷದ ಮುಖ್ಯಸ್ಥರೂ ಆಗಿರುವ ಕೆಸಿಆರ್‌, ಬಿಜೆಪಿಯ ಜನವಿರೋಧಿ ನೀತಿಗಳ ವಿರುದ್ಧ ತಾವು ಆರಂಭಿಸಿರುವ ಅಭಿಯಾನದ ಭಾಗವಾಗಿ ಠಾಕ್ರೆ, ಪವಾರ್‌ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಶಿವಸೇನಾ ಮುಖ್ಯಸ್ಥರೂ ಆಗಿರುವ ಠಾಕ್ರೆ ಅವರು ಕೆಸಿಆರ್ ಅವರಿಗೆ ಬುಧವಾರ ದೂರವಾಣಿ ಕರೆ ಮಾಡಿ, ಮುಂಬೈಗೆ ಬರುವಂತೆ ಆಹ್ವಾನಿಸಿದ್ದರು.

ADVERTISEMENT

ಠಾಕ್ರೆ ಅವರೊಂದಿಗಿನ ಸಭೆ ಬಳಿಕ ಕೆಸಿಆರ್‌, ಪವಾರ್‌ ಅವರ ನಿವಾಸಕ್ಕೆ ತೆರಳಿ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ನೀತಿಗಳ ವಿರುದ್ಧ ಹೋರಾಟ ಹಾಗೂ ಒಕ್ಕೂಟ ವ್ಯವಸ್ಥೆಯನ್ನು ಎತ್ತಿಹಿಡಿಯುವ ರಾವ್ ಅವರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಠಾಕ್ರೆ ಇತ್ತೀಚೆಗೆ ಘೋಷಿಸಿದ್ದರು. ವಿಭಜಕ ಶಕ್ತಿಗಳಿಂದ ದೇಶವನ್ನು ರಕ್ಷಿಸಲು ಸೂಕ್ತ ಸಮಯದಲ್ಲಿ ಕೆಸಿಆರ್ ಮುಂದಾಗಿದ್ದಾರೆ ಎಂದೂಅಭಿಪ್ರಾಯಪಟ್ಟಿದ್ದರು.

ದೇವೇಗೌಡ, ಮಮತಾ ಬೆಂಬಲ: ಒಕ್ಕೂಟ ವ್ಯವಸ್ಥೆರಕ್ಷಣೆಗಾಗಿ ಆರಂಭಿಸಿರುವ ಹೋರಾಟವನ್ನು ಬೆಂಬಲಿಸಿ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಕೆಸಿಆರ್ ಅವರಿಗೆ ಮಂಗಳವಾರ ಕರೆ ಮಾಡಿದ್ದರು. ಇದೇ ವಿಚಾರವಾಗಿ ಚರ್ಚಿಸಲು ಬೆಂಗಳೂರಿಗೆ ಬರುವುದಾಗಿ ದೇವೇಗೌಡ ಅವರಿಗೆ ಕೆಸಿಆರ್ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.