ADVERTISEMENT

ಆಂಧ್ರ, ತೆಲಂಗಾಣ: ಕವಿತಾ, ಶರ್ಮಿಳಾ ಅಸ್ತಿತ್ವಕ್ಕಾಗಿ ಹೋರಾಟ

ತೆಲುಗು ಭಾಷಿಕ ರಾಜ್ಯಗಳಲ್ಲಿ ರಾಜಕೀಯ ಕುಟುಂಬದ ಕುಡಿಗಳು

ಪಿಟಿಐ
Published 11 ಡಿಸೆಂಬರ್ 2022, 15:48 IST
Last Updated 11 ಡಿಸೆಂಬರ್ 2022, 15:48 IST
ವೈ.ಎಸ್. ಶರ್ಮಿಳಾ ಮತ್ತು ಕೆ. ಕವಿತಾ
ವೈ.ಎಸ್. ಶರ್ಮಿಳಾ ಮತ್ತು ಕೆ. ಕವಿತಾ    

ಹೈದರಾಬಾದ್: ತೆಲುಗು ಭಾಷಿಕ ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಪ್ರತಿಷ್ಠಿತ ರಾಜಕೀಯ ಕುಟುಂಬಗಳ ಮಹಿಳಾ ರಾಜಕಾರಣಿಗಳಾದ ವೈ.ಎಸ್. ಶರ್ಮಿಳಾ ಮತ್ತು ಕೆ. ಕವಿತಾ ಆಯಾ ರಾಜ್ಯಗಳಲ್ಲಿ ತಮ್ಮ ರಾಜಕೀಯ ಭವಿಷ್ಯ ನಿರ್ಧರಿಸುವ ಪ್ರಸ್ತುತ ಬೆಳವಣಿಗೆಗಳಲ್ಲಿ ಸುದ್ದಿಯಲ್ಲಿದ್ದಾರೆ.

ಕೆ. ಕವಿತಾ ಅವರು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆಸಿಆರ್) ಅವರ ಪುತ್ರಿಯಾದರೆ, ವೈ.ಎಸ್. ಶರ್ಮಿಳಾ ಅವರು ಅವಿಭಿಜಿತ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿ. ವೈ.ಎಸ್. ರಾಜಶೇಖರ್ ರೆಡ್ಡಿ (ವೈಎಸ್‌ಆರ್‌) ಅವರ ಪುತ್ರಿ.

ದೆಹಲಿ ಮದ್ಯ ನೀತಿ ಹಗರಣದಲ್ಲಿಸಿಬಿಐನಿಂದ ತನಿಖೆಗೊಳಾಗುವ ಮೂಲಕ ಕವಿತಾ ಸುದ್ದಿಯಲ್ಲಿದ್ದರೆ, ಶರ್ಮಿಳಾ ತಾವೇ ಕಟ್ಟಿ ಬೆಳೆಸುತ್ತಿರುವ ವೈಎಸ್‌ಆರ್ ತೆಲಂಗಾಣ ಪಕ್ಷದ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಮೂಲಕ ಸುದ್ದಿಯಲ್ಲಿದ್ದಾರೆ.

ADVERTISEMENT

ಪ್ರತ್ಯೇಕ ತೆಲಂಗಾಣ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕವಿತಾ 2014ರ ಸಾರ್ವತ್ರಿಕ ಚುನಾವಣೆಯಲ್ಲಿ ನಿಜಾಮಾಬಾದ್ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾದರು. ಆದರೆ, 2019ರಲ್ಲಿ ಬಿಜೆಪಿ ನಾಯಕ ಅರವಿಂದ್ ಧರ್ಮಪುರಿ ವಿರುದ್ಧ ಸೋತ ಅವರು ಪ್ರಸ್ತುತ ಭಾರತ ರಾಷ್ಟ್ರ ಸಮಿತಿಪಕ್ಷದ (ಬಿಆರ್‌ಎಸ್‌) ವಿಧಾನ ಪರಿಷತ್ ಸದಸ್ಯೆಯಾಗಿದ್ದಾರೆ.

ದೆಹಲಿಯ ಅಬಕಾರಿ ಹಗರಣದಲ್ಲಿ ಆಪಾದಿತರ ಕುರಿತು ಜಾರಿ ನಿರ್ದೇಶನಾಲಯವು (ಇ.ಡಿ) ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವರದಿಯಲ್ಲಿತಮ್ಮ ಹೆಸರು ಕೇಳಿಬಂದಾಗ ಕವಿತಾ, ತಾವು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದರು. ಈ ಬೆನ್ನಲ್ಲೆ ಸಿಬಿಐ ಭಾನುವಾರ ಸುಮಾರು ಆರು ತಾಸುಗಳ ಕಾಲ ಕವಿತಾ ಅವರ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

2019ರ ವಿಧಾನಸಭಾ ಚುನಾವಣೆಯಲ್ಲಿ ಅಣ್ಣ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಪರ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಶರ್ಮಿಳಾ, ಅಣ್ಣನ ವಿರೋಧದ ನಡುವೆಯೇ ವೈಎಸ್‌ಆರ್‌ ತೆಲಂಗಾಣ ಪಕ್ಷವನ್ನು ಕಟ್ಟಿದವರು.

ತೆಲಂಗಾಣ ರಾಜಕೀಯದಲ್ಲಿ ವಲಯದಲ್ಲಿ ಶರ್ಮಿಳಾ ಅವರನ್ನು ಗಂಭೀರವಾಗಿ ಪರಿಗಣಿಸಿಲ್ಲವಾದರೂ, ಅವರ ಇತ್ತೀಚಿನ ಚಟುವಟಿಕೆಗಳ ಕಾರಣಕ್ಕಾಗಿ ಅವರು ಚರ್ಚೆಯಲ್ಲಿದ್ದಾರೆ. ತೆಲಂಗಾಣದಲ್ಲಿ ‘ಪಾದಯಾತ್ರೆ’ (ಕಾಲ್ನಡಿಗೆ ಜಾಥಾ) ಹಮ್ಮಿಕೊಂಡಿರುವ ಶರ್ಮಿಳಾ ಇದುವರೆಗೆ 3,500 ಕಿ.ಮೀ ವರೆಗೆ ಯಾತ್ರೆ ನಡೆಸಿದ್ದಾರೆ.

ಯಾತ್ರೆಯ ಸಂದರ್ಭದಲ್ಲೇ ಶರ್ಮಿಳಾ ಅವರ ಬೆಂಗಾವಲು ವಾಹನ ಹಾಗೂ ಅವರ ಪಕ್ಷದ ಕಾರ್ಯಕರ್ತರ ವಾಹನಗಳ ಮೇಲೆ ಟಿಆರ್‌ಎಸ್ ಬೆಂಬಲಿಗರು ದಾಳಿ ನಡೆಸಿದ್ದರು. ಇದನ್ನು ವಿರೋಧಿಸಿ ಮುಖ್ಯಮಂತ್ರಿ ಕೆಸಿಎರ್ ಮನೆ ಮುಂದೆ ಪ್ರತಿಭಟಿಸಲು ತೆರಳುತ್ತಿದ್ದ ವೇಳೆ ಶರ್ಮಿಳಾ ಅವರನ್ನು ಕಾರುಸಮೇತ ಪೊಲೀಸರು ಎಳೆದೊಯ್ದಿದ್ದರು. ಈ ಘಟನೆ ದೇಶದಾದ್ಯಂತ ಸುದ್ದಿಯಾಗಿತ್ತು. ಅಷ್ಟೇ ಅಲ್ಲ ದಕ್ಷಿಣ ಭಾರತದ ರಾಜಕೀಯ ಪಕ್ಷಗಳಿಂದ ಟೀಕೆಗೂ ಒಳಗಾಯಿತು. ಈ ಸಂದರ್ಭದಲ್ಲಿ ಕವಿತಾ ಮತ್ತು ಶರ್ಮಿಳಾ ಟ್ವಿಟ್ಟರ್‌ನಲ್ಲಿ ಪರಸ್ಪರ ಟೀಕೆಗಳನ್ನು ಮಾಡಿಕೊಂಡಿದ್ದರು.

ಈ ಘಟನೆಯ ಬಳಿಕ ತೆಲಂಗಾಣ ಪೊಲೀಸರು ಶರ್ಮಿಳಾ ಅವರ ‘ಪಾದಯಾತ್ರೆ’ಗೆ ಅನುಮತಿ ನಿರಾಕರಿಸಿದರು. ವಾರಂಗಲ್ ಜಿಲ್ಲೆಯಲ್ಲಿ ಇದಕ್ಕೆ ತಡೆಯೊಡ್ಡಲಾಯಿತು. ಈ ಕ್ರಮವನ್ನು ಪ್ರಶ್ನಿಸಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಶರ್ಮಿಳಾ ಅವರ ಪ್ರತಿಭಟನೆಯನ್ನೂ ಪೊಲೀಸರು ವಿಫಲಗೊಳಿಸಿದ್ದು, ಅನಾರೋಗ್ಯಕ್ಕೀಡಾಗಿರುವ ಶರ್ಮಿಳಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಧ್ರದ ರಾಜಕೀಯ ನಂಟಿದ್ದರೂ ಒಂದು ಕಾಲದಲ್ಲಿ ಆಂಧ್ರದ ಭಾಗವಾಗಿದ್ದ ತೆಲಂಗಾಣದ ನೆಲ ತಮಗೆ ಪ್ರಸ್ತುತ ಎಂಬುದನ್ನು ತೋರಿಸಲು ಶರ್ಮಿಳಾ ಪದೇ ಪದೇ ಯತ್ನಿಸುತ್ತಿದ್ದಾರೆ. ‘ನಾನು ಹೈದರಾಬಾದ್‌ನಲ್ಲಿ ಓದಿರುವೆ. ನನ್ನ ಮಗ ಮತ್ತು ಮಗಳಿಗೆ ಇಲ್ಲಿಯೇ ಜನ್ಮ ನೀಡಿರುವೆ’ ಎಂದು ಹೇಳುವ ಮೂಲಕ ತೆಲಂಗಾಣದ ನಂಟನ್ನು ಸಾಬೀತುಪಡಿಸಲು ಯತ್ನಿಸುತ್ತಿದ್ದಾರೆ. ಒಟ್ಟಾರೆ ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಶರ್ಮಿಳಾ ತೆಲಂಗಾಣದ ರಾಜಕೀಯದಲ್ಲಿ ನೆಲೆ ಕಂಡುಕೊಳ್ಳುವ ಹವಣಿಕೆಯಲ್ಲಿದ್ದಾರೆ. ಮತ್ತೊಂದೆಡೆ ‘ದೆಹಲಿ ಅಬಕಾರಿ ಹಗರಣ’ದಲ್ಲಿ ಕ್ಲೀನ್ ಚಿಟ್ ಪಡೆದರೆ ಕವಿತಾ ಅವರು ಕಳಂಕರಹಿತ ನಾಯಕಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.