ಚೆನ್ನೈ: ತಮಿಳುನಾಡಿನ ಕಲ್ಲಕುರಿಚಿ ವಸತಿ ಶಾಲೆಯೊಂದರಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ವಿದ್ಯಾರ್ಥಿನಿಯ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.
ವಿದ್ಯಾರ್ಥಿನಿಯುಕಡಲೂರು ಜಿಲ್ಲೆಯ ಪೆರಿಯನಸಲೂರು ಗ್ರಾಮದವರು. ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 13ರಂದುವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ಆಕೆಯ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಒಂದು ವಾರದಿಂದ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಶಾಲೆಯ ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ. ಅಲ್ಲದೆ, ಹಿಂಸಾಚಾರದಲ್ಲಿಭಾಗಿಯಾಗಿದ್ದಕ್ಕಾಗಿ ಮತ್ತು ಜುಲೈ 17 ರಂದು ಶಾಲೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಸುಮಾರು 300ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿದ್ಯಾರ್ಥಿನಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪೋಷಕರು, ಮೃತದೇಹವನ್ನು ಮರು ಮರಣೋತ್ತರ ಪರೀಕ್ಷೆ ನಡೆಸಬೇಕುಮತ್ತು ವೈದ್ಯರ ತಂಡಕ್ಕೆ ತಮ್ಮಆಯ್ಕೆಯ ವೈದ್ಯರನ್ನು ಸೇರಿಸಬೇಕು ಎಂದುಪಟ್ಟು ಹಿಡಿದಿದ್ದರು. ಜತೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ವಿದ್ಯಾರ್ಥಿನಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ಮಂಗಳವಾರ ವಜಾಗೊಳಿಸಿತ್ತು.
ವಿದ್ಯಾರ್ಥಿನಿ ಮೃತದೇಹದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿದ್ದು, ಶವ ಪಡೆದು ಅಂತ್ಯಕ್ರಿಯೆ ನಡೆಸುವಂತೆ ಕುಟುಂಬಸ್ಥರಿಗೆ ಸೂಚಿಸಿ ಇತ್ತೀಚೆಗೆ ಪೊಲೀಸರು ವಿದ್ಯಾರ್ಥಿನಿಯ ಮನೆಯ ಹೊರಗೆ ನೋಟಿಸ್ ಅಂಟಿಸಿದ್ದರು.
ಕಲ್ಲಕುರಿಚಿ ಹಿಂಸಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ ಎಂದು ತಮಿಳುನಾಡಿನ ಡಿಜಿಪಿ ಸಿ. ಶೈಲೇಂದ್ರ ಬಾಬು ತಿಳಿಸಿದ್ದಾರೆ.
ಇವನ್ನೂ ಓದಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.