ADVERTISEMENT

ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜ: ತಿರಂಗದ ಮೇಲಿನ ಸುಪ್ತದ್ವೇಷ ಎಂದ ಕಾಂಗ್ರೆಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2021, 14:08 IST
Last Updated 22 ಆಗಸ್ಟ್ 2021, 14:08 IST
ಕಲ್ಯಾಣ್‌ ಸಿಂಗ್‌ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿರುವ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜ ಹೊದಿಸಿರುವುದು (ಪಿಟಿಐ)
ಕಲ್ಯಾಣ್‌ ಸಿಂಗ್‌ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಿರುವ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜ ಹೊದಿಸಿರುವುದು (ಪಿಟಿಐ)   

ಬೆಂಗಳೂರು: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕ ಕಲ್ಯಾಣ್‌ ಸಿಂಗ್‌ ಅವರ ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜ ಹೊದಿಸಿದ ಬಿಜೆಪಿ ನಾಯಕರ ನಡೆಯನ್ನು ಕಾಂಗ್ರೆಸ್‌ ಖಂಡಿಸಿದೆ.

ಭಾನುವಾರ ಲಖನೌನಲ್ಲಿ ಕಲ್ಯಾಣ್‌ ಸಿಂಗ್‌ ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಜೆ.‍ಪಿ ನಡ್ಡಾ ಅವರು, ಕಲ್ಯಾಣ್‌ ಸಿಂಗ್‌ ಪಾರ್ಥಿವ ಶರೀರದ ಮೇಲೆ ಬಿಜೆಪಿ ಧ್ವಜ ಹೊದಿಸಿದ್ದರು. ಆದರೆ, ಉತ್ತರ ಪ್ರದೇಶದ ಎರಡು ಬಾರಿಯ ಸಿಎಂ ಕಲ್ಯಾಣ್‌ ಸಿಂಗ್‌ ದೇಹದ ಮೇಲೆ ಅದಾಗಲೇ ರಾಷ್ಟ್ರಧ್ಜಜವನ್ನು ಹೊದಿಸಿ ಆಗಿತ್ತು. ಹೀಗಾಗಿ ಬಿಜೆಪಿ ಧ್ವಜವನ್ನು ತಿರಂಗದ ಮೇಲೆ ಹೊದಿಸಬೇಕಾಯಿತು.

ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜವನ್ನು ಹಾಕಿದ ಕಾರಣಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. ‘ಬಿಜೆಪಿಗರು ಯಾವ ಪರಿಸ್ಥಿತಿಯಲ್ಲೂ ಪಕ್ಷದ ಹಾಗೂ ಮೋದಿಯ 'ಬ್ರಾಂಡಿಂಗ್' ಮಾಡುವ ಅವಕಾಶ ಬಿಡರು. ಶವವಾದರೂ ಸರಿಯೇ. ಕಲ್ಯಾಣ್ ಸಿಂಗ್‌ರ ಮೃತದೇಹಕ್ಕೆ ಹೊದಿಸಿದ್ದ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜ ಹಾಕುವ ಮೂಲಕ ರಾಷ್ಟ್ರಧ್ವಜದ ಮೇಲಿರುವ ತಮ್ಮ ಸುಪ್ತದ್ವೇಷ ಹೊರಹಾಕಿ ಬಿಜೆಪಿ ನಾಯಕರು ಅವಮಾನಿಸಿದ್ದಾರೆ. ಬಿಜೆಪಿಯ ನಕಲಿ ದೇಶಭಕ್ತಿ ಅನಾವರಣಗೊಂಡಿದೆ,’ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮಾಡಿ ಟೀಕಿಸಿದೆ.

ADVERTISEMENT

ನನ್ನ ದೇಹ ಬಿಜೆಪಿ ಧ್ವಜದಿಂದಲೇ ಸುತ್ತಬೇಕು ಎಂದಿದ್ದ ಕಲ್ಯಾಣ್‌ ಸಿಂಗ್‌

ರಾಷ್ಟ್ರ ಧ್ವಜದ ಮೇಲೆ ಬಿಜೆಪಿ ಧ್ವಜವನ್ನು ಹೊದಿಸಿದ ವಿಚಾರ ದೇಶದಲ್ಲಿ ಚರ್ಚೆಗೆ ಒಳಗಾಗಿದೆ. ಇದೇ ಹಿನ್ನೆಲೆಯಲ್ಲಿ ಬಿಜೆಪಿಯು ಕಲ್ಯಾಣ್‌ ಸಿಂಗ್‌ ಅವರ ಶಪಥದ ಹಳೆ ವಿಡಿಯೊವೊಂದನ್ನು ಮತ್ತೆ ವೈರಲ್‌ ಮಾಡಿದೆ. ಅದರಲ್ಲಿ, ಕಲ್ಯಾಣ್‌ ಸಿಂಗ್‌ ಅವರು, ‘ನನ್ನ ದೇಹವನ್ನು ಬಿಜೆಪಿ ಧ್ವಜದಿಂದಲೇ ಸುತ್ತಬೇಕು’ ಎಂದು ಹೇಳಿದ್ದರು.

‘ಸಂಘ ಮತ್ತು ಭಾರತೀಯ ಜನತಾ ಪಕ್ಷದ ಸಂಸ್ಕಾರ ನನ್ನ ರಕ್ತದ ಹನಿಗಳಲ್ಲಿ ಬೆರೆತು ಹೋಗಿದೆ. ಅದಕ್ಕಾಗಿಯೇ ನಾನು ನನ್ನ ಜೀವನದುದ್ದಕ್ಕೂ ಬಿಜೆಪಿಯಲ್ಲಿಯೇ ಇರಬೇಕೆಂದು ಬಯಸಿದ್ದೇನೆ. ನನ್ನ ಅಂತ್ಯ ಸಂಭವಿಸಿದಾಗ, ನನ್ನ ಮೃತ ದೇಹವನ್ನು ಬಿಜೆಪಿ ಧ್ವಜದಲ್ಲೇ ಸುತ್ತಿಡಬೇಕು,’ ಎಂದು ಸಿಂಗ್ ಕಣ್ಣೀರು ಹಾಕುತ್ತಾ ಹೇಳಿದ್ದ ವಿಡಿಯೊವನ್ನು ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಈ ಮೂಲಕ, ಪಕ್ಷದ ಧ್ವಜವನ್ನು ರಾಷ್ಟ್ರ ಧ್ವಜದ ಮೇಲೆ ಹೊದಿಸಿದ ನಿಲುವನ್ನು ಬಿಜೆಪಿ ಪರೋಕ್ಷವಾಗಿ‌ ಸಮರ್ಥಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.