ಲಖನೌ: ಬಿಜೆಪಿಯ ಹಿರಿಯ ನಾಯಕ ಕಲ್ಯಾಣ್ ಸಿಂಗ್ ನಿಧನದಿಂದ ಸಮಾಜಕ್ಕೆ ಮತ್ತು ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಭಿಪ್ರಾಯಪಟ್ಟಿದ್ದಾರೆ.
ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕಲ್ಯಾಣ್ ಸಿಂಗ್ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದಾರೆ.
1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದಾಗ ಕಲ್ಯಾಣ್ ಸಿಂಗ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
‘ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಮಾಜಿ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರು ಇನ್ನಿಲ್ಲ. ಇದು ನಮ್ಮೆಲ್ಲರಿಗೆ ದುಃಖದ ವಿಷಯ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಮತ್ತು ಸಮೂಹ ನಾಯಕರಾಗಿ ಅವರು ಆಡಳಿತದಲ್ಲಿ ಪಾರದರ್ಶಕತೆ ಮತ್ತು ದೃಢತೆಯನ್ನು ತೋರಿಸಿದ್ದರು’ ಎಂದು ಯೋಗಿ ಆದಿತ್ಯನಾಥ ಬಣ್ಣಿಸಿದ್ದಾರೆ.
‘ಕಲ್ಯಾಣ್ ಸಿಂಗ್ ಅನುಸರಿಸಿದ ಮೌಲ್ಯಗಳು ಇಂದಿಗೂ ಗಟ್ಟಿಯಾಗಿವೆ. ಅವರು ರಾಮ ಮಂದಿರ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ನಾಯಕರಾಗಿದ್ದು, ಅದಕ್ಕಾಗಿ ಅಧಿಕಾರವನ್ನು ತ್ಯಜಿಸಲೂ ಹಿಂಜರಿದಿರಲಿಲ್ಲ. ಅದರಿಂದಾಗಿಯೇ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಸಾಧ್ಯವಾಗುತ್ತಿದೆ. 1992ರ ಡಿಸೆಂಬರ್ 6ರ ಘಟನೆ ಬಳಿಕ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು’ ಎಂದು ಯೋಗಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.