ಚೆನ್ನೈ: ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ತಮಿಳುನಾಡಿನ 2 ಲಕ್ಷ ಮಂದಿ ಸರ್ಕಾರಿ ಶಿಕ್ಷಕರು ಶಾಲೆಗೆ ಮರಳುವಂತೆ ನಟ, ರಾಜಕಾರಣಿ ಕಮಲ್ ಹಾಸನ್ ಮನವಿ ಮಾಡಿದ್ದಾರೆ. ಪ್ರತಿಭಟನೆಗಳು ವಿದ್ಯಾರ್ಥಿಗಳ ಶಿಕ್ಷಣವನ್ನು ಮೊಟುಕುಗೊಳಿಸುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
'ನಾಳಿನ ಭರವಸೆಗಳಾದ ವಿದ್ಯಾರ್ಥಿಗಳ ಶಿಕ್ಷಣ ನಮ್ಮ ಜವಾಬ್ದಾರಿ. ಶಿಕ್ಷಕರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಹಾಗೂ ಶಿಕ್ಷಣವನ್ನು ಉಳಿಸಿಕೊಳ್ಳುವುದು ಶಿಕ್ಷಕರ ಕರ್ತವ್ಯ. ಶಾಲೆಗಳ ಪ್ರಾರಂಭಕ್ಕೆ ಮತ್ತು ಹಕ್ಕುಗಳಿಗಾಗಿ ಚರ್ಚೆ ಮುಂದುವರಿಯಲಿ' ಎಂದು ಕಮಲ್ ಹಾಸನ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಬದುಕಿನ ಸಂಜೆಯ ದಿನಗಳಲ್ಲಿ ಪಿಂಚಣಿ ಹಾಗೂ 7ನೇ ವೇತನ ಆಯೋಗದ ಪ್ರಕಾರ ಬಾಕಿ ಮೊತ್ತಕ್ಕಾಗಿ ಆಗ್ರಹಿಸಿ ಕಳೆದ ವಾರದಿಂದ 2 ಲಕ್ಷ ಮಂದಿ ಸರ್ಕಾರಿ ಶಿಕ್ಷಕರು ಹಾಗೂ ಸರ್ಕಾರದ ಇತರೆ ಇಲಾಖೆಗಳ ಸುಮಾರು 3 ಲಕ್ಷ ಮಂದಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಶಿಕ್ಷಣ ಇಲಾಖೆ ಸೇರಿದಂತೆ ಬಹುತೇಕ ಇಲಾಖೆಗಳಲ್ಲಿ ಕಾರ್ಯ ಸ್ಥಗಿತಗೊಂಡಿದೆ.
ಶಾಲಾ ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಗೆ ಸಮೀಪಿಸುತ್ತಿರುವ ಸಮಯದಲ್ಲಿ ಶಿಕ್ಷಕರು ಪ್ರತಿಭಟನೆಯಲ್ಲಿ ನಿರತರಾಗಿರುವುದು ವಿದ್ಯಾರ್ಥಿಗಳಲ್ಲಿಯೂ ಆತಂಕಕ್ಕೆ ಕಾರಣವಾಗಿದೆ. 10ನೇ ತರಗತಿಯ ವಿದ್ಯಾರ್ಥಿಗಳು ಕೊನೆಯ ಹಂತದ ಸಿದ್ಧತೆ, ಪೂರ್ಣಗೊಳ್ಳದ ಪಾಠ, ಶಿಕ್ಷಕರಿಂದ ಅಗತ್ಯವಿರುವ ಮಾರ್ಗದರ್ಶನಕ್ಕಾಗಿ ಕಾದಿದ್ದು, ’ಶಿಕ್ಷಕರಿಗೆ ಪಿಂಚಣಿ ನೀಡಲಿ, ಅದಕ್ಕಾಗಿ ಅವರು ಹೋರಾಟ ನಡೆಸಲಿ..ಆದರೆ, ನಮಗೆ ತೊಂದರೆಯಾಗದಂತೆ ಅವರು ಪ್ರತಿಭಟಿಸಲು ಸಾಧ್ಯವಿಲ್ಲವೇ?’ ಎಂದು ವಿದ್ಯಾರ್ಥಿಯೊಬ್ಬ ಅಳವತ್ತುಕೊಂಡಿದ್ದಾನೆ.
’ತಿಂಗಳ ಸಂಬಳದಲ್ಲಿ ಪಿಂಚಣಿ ಯೋಜನೆಗಾಗಿ ಹಣ ಕಡಿತಗೊಳ್ಳುತ್ತಿದೆ. ಆದರೆ, ಇತ್ತೀಚಿನ ಕೆಲ ತಿಂಗಳಲ್ಲಿ ನಿವೃತ್ತಿ ಹೊಂದಿರುವ ಸುಮಾರು 4,000 ನೌಕರರಿಗೆ ಸೂಕ್ತ ಮೊತ್ತ ಕೈಸೇರಿಲ್ಲ. ತಿಂಗಳ ಪಿಂಚಣಿ ಇಲ್ಲದೆ ಜೀವನ ನಿರ್ವಹಣೆಯ ಬಗೆಗೆ ಚಿಂತೆ ಕಾಡುತ್ತಿದೆ. ಸರಳ ಬದುಕಿಗೂ ಹೆಚ್ಚು ಮೊತ್ತ ವ್ಯಯಿಸಬೇಕಾದ ಸ್ಥಿತಿಯಲ್ಲಿ ಇತರೆ ಉಳಿತಾಯ ಅಸಾಧ್ಯವಾಗಿದ್ದು, ನಾನು ನಿವೃತ್ತಿ ಹೊಂದಿದ ನಂತರ ಪ್ರತಿ ತಿಂಗಳು ನನಗೆ ಯಾವುದೇ ಹಣ ದೊರೆಯದಿದ್ದರೆ ಬದುಕು ಹೇಗೆ?’ ಎಂದು ಶಿಕ್ಷಕರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
’ಒಂದು ಬಾರಿ ಶಾಸಕನಾದರೂ ಜೀವನ ಪರ್ಯಂತೆ ಪಿಂಚಣಿ ಪಡೆಯುತ್ತಾರೆ. ಒಂದೇ ದಿನದಲ್ಲಿ ಶಾಸಕರ ಸಂಬಳವನ್ನು ಶೇ 100ರಷ್ಟು ಏರಿಕೆ ಮಾಡಿ ವಿಧಾನಸಭೆಯಲ್ಲಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಆದರೆ, 20ಕ್ಕೂ ಹೆಚ್ಚು ವರ್ಷ ಶಿಕ್ಷಣ ಸೇವೆ ಸಲ್ಲಿಸುವ ನಮಗೆ ಸಿಗುವುದೇನು..’ ಎಂದು ಮತ್ತೊಬ್ಬ ಶಿಕ್ಷಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಜ ಚಂಡಮಾರುತ ಸೃಷ್ಟಿಸಿದ ಹಾನಿಯನ್ನು ಸರಿಪಡಿಸಲು ಆರ್ಥಿಕ ಸಂಕಟ ಸೃಷ್ಟಿಯಾಗಿದ್ದು, ಇಂಥ ಸಂದರ್ಭದಲ್ಲಿ ಶಿಕ್ಷಕರ ಬೇಡಿಕೆಗಳನ್ನು ಪೂರೈಸಲು ಅಸಾಧ್ಯ ಎಂದು ಸರ್ಕಾರ ಹೇಳಿದೆ. ಸಂಬಳ ಹಾಗೂ ಪಿಂಚಣಿಗಾಗಿ ಈಗಾಗಲೇ ಆದಾಯದ ಶೇ 75ರಷ್ಟು ವ್ಯಯಿಸಲಾಗುತ್ತಿದ್ದು, ಇದೀಗ ಅರೆಕಾಲಿಕ ಶಿಕ್ಷಕರನ್ನು ನೇಮಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.