ಚೆನ್ನೈ: ನಟ ಹಾಗೂ ತಮಿಳುನಾಡಿನ ಮಕ್ಕಳ ನಿಧಿ ಮಯಂ (ಎಂಎನ್‌ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು ರಾಜಕಾರಣದಲ್ಲಿ ಭ್ರಷ್ಟಾಚಾರ ತೊಲಗಿಸಲು, ಸಾರ್ವಜನಿಕರಿಂದ ದೇಣಿಗೆ ಸ್ವೀಕರಿಸುವ ಪ್ರಸ್ತಾಪವನ್ನು ಮತ್ತೆ ಮಾಡಿದ್ದಾರೆ.
ಈ ಕುರಿತು ಗುರುವಾರ ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕರು ತಮ್ಮ ಪಕ್ಷಕ್ಕೆ ದೇಣಿಗೆ ನೀಡಬಹುದು ಎಂದು ಹೇಳಿಕೊಂಡಿದ್ದಾರೆ.
‘ರಾಜಕೀಯ ಪಕ್ಷಕ್ಕೆ ಸಾರ್ವಜನಿಕರೇ ದೇಣಿಗೆ ನೀಡುವುದರಿಂದ ಭ್ರಷ್ಟಾಚಾರವನ್ನು ತೊಲಗಿಸಬಹುದು ಎಂದು ನಾನು ನಂಬುತ್ತೇನೆ. ನಾನು ದೇಣಿಗೆ ಒಂದನ್ನೇ ಕೇಳುತ್ತಿಲ್ಲ. ಮುಂದಿನ ಪೀಳಿಗೆಗೆ ಮಾದರಿಯಾದ ಸಮಾಜ ಕಟ್ಟುವ ವಾಗ್ದಾನ ನೀಡಿ ಎಂದಿದ್ದೇನೆ’ ಎಂದು ಹೇಳಿದ್ದಾರೆ.
‘ಈ ನಿರ್ಧಾರದಿಂದ ಚಿತ್ರರಂಗ ಸೇರಿದಂತೆ ಅನೇಕರು ನನ್ನನ್ನು ಅಣಕವಾಡಿದ್ದರು. ಆದರೆ, ನಾನು ನನ್ನ ಕೆಲಸವನ್ನು ನಂಬುತ್ತೇನೆ’ ಎಂದಿದ್ದಾರೆ.
ಈ ಹಿಂದೆಯೂ ಕೂಡ ಕಮಲ್ ಹಾಸನ್ ಅವರು ತಮ್ಮ ಪಕ್ಷಕ್ಕೆ ಸಾರ್ವಜನಿಕರು ದೇಣಿಗೆ ಸಲ್ಲಿಸಬಹುದು ಎಂದು ಕೇಳಿಕೊಂಡಿದ್ದರು. ಆದರೆ, ಅದನ್ನು ಆಗ ತಾತ್ಕಾಲಿಕವಾಗಿ ತಡೆ ಹಿಡಿದಿದ್ದರು.
ಎಂಎನ್‌ಎಂ ಪಕ್ಷ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಇದೀಗ ತಮಿಳುನಾಡಿನ ಮಹಾನಗರ ಪಾಲಿಕೆ ಹಾಗೂ ನಗರಸಭೆ ಚುನಾವಣೆಗಳಲ್ಲೂ ಸ್ಪರ್ಧಿಸಲು ಮುಂದಡಿ ಇಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.