ADVERTISEMENT

ರಜನಿಕಾಂತ್‌ ಜೊತೆ ಕೈಜೋಡಿಸುವುದು 'ಒಂದು ಫೋನ್‌ ಕರೆ ಅಂತರದಲ್ಲಿದೆ'–ಕಮಲ್‌ ಹಾಸನ್

ಏಜೆನ್ಸೀಸ್
Published 15 ಡಿಸೆಂಬರ್ 2020, 16:46 IST
Last Updated 15 ಡಿಸೆಂಬರ್ 2020, 16:46 IST
ಕಮಲ್‌ ಹಾಸನ್ ಮತ್ತು ರಜನಿಕಾಂತ್‌ ಜೊತೆಯಾಗಿ ಕಾಣಿಸಿಕೊಂಡ ಸಂದರ್ಭ–ಸಾಂದರ್ಭಿಕ ಚಿತ್ರ
ಕಮಲ್‌ ಹಾಸನ್ ಮತ್ತು ರಜನಿಕಾಂತ್‌ ಜೊತೆಯಾಗಿ ಕಾಣಿಸಿಕೊಂಡ ಸಂದರ್ಭ–ಸಾಂದರ್ಭಿಕ ಚಿತ್ರ   

ನವದೆಹಲಿ: 'ರಜನಿಕಾಂತ್‌ ಮತ್ತು ತಮ್ಮ ಪಕ್ಷದ ಮೈತ್ರಿಯು ಕೇವಲ ಒಂದು ಫೋನ್‌ ಕರೆ ಅಂತರದಲ್ಲಿದೆ' ಎಂದು ಮಕ್ಕಳ್‌ ನೀದಿಮಯಂ (ಎಂಎನ್‌ಎಂ) ಪಕ್ಷದ ಸಂಸ್ಥಾಪಕ ಮತ್ತು ನಟ ಕಮಲ್‌ ಹಾಸನ್‌ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ.

ಮುಂದಿನ ವರ್ಷ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನಟ ರಜನಿಕಾಂತ್‌ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಅವರ ಪಕ್ಷಕ್ಕೆ ಅಧಿಕೃತ ಚಾಲನೆ ದೊರೆಯುವ ಮುನ್ನವೇ ರಜನಿಕಾಂತ್‌–ಕಮಲ್‌ ಪಕ್ಷಗಳ ಮೈತ್ರಿಗೆ ಸಂಬಂಧಿಸಿದಂತೆ ಚರ್ಚೆಯಾಗುತ್ತಿದೆ.

ಮೈತ್ರಿಗೆ ಸಿದ್ಧವಿರುವಿರೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಮಲ್‌, 'ನಾವು ಕೇವಲ ಒಂದು ಫೋನ್‌ ಕರೆಯ ಅಂತರದಲ್ಲಿದ್ದೇವೆ. ನಮ್ಮ ಸಿದ್ಧಾಂತಗಳು ಒಪ್ಪಿತವಾದರೆ ಮತ್ತು ಅದರಿಂದ ಜನರಿಗೆ ಅನುಕೂಲವಾಗುವುದಾದರೆ ನಾವು ನಮ್ಮ ಅಹಂ ಬದಿಗಿಟ್ಟು, ಒಬ್ಬರಿಗೊಬ್ಬರು ಸಹಕರಿಸುತ್ತೇವೆ' ಎಂದಿದ್ದಾರೆ.

ADVERTISEMENT

'ಅವರು (ರಜನಿಕಾಂತ್‌) ಮೈತ್ರಿ ಕುರಿತು ನಿರ್ಧರಿಸಬೇಕಿದೆ, ಅನಂತರಷ್ಟೇ ಇಬ್ಬರೂ ಒಟ್ಟಿಗೆ ಕುಳಿತು ಮುಂದಿನ ಚರ್ಚೆ ನಡೆಸುತ್ತೇವೆ' ಎಂದು ಕಮಲ್‌ ಹಾಸನ್‌ ಮಾಧ್ಯಮಗಳಿಗೆ ಹೇಳಿದ್ದಾರೆ.

2021ರ ಜನವರಿಯಲ್ಲಿ ರಾಜಕೀಯ ಪಕ್ಷ ಆರಂಭಿಸುವುದಾಗಿ ರಜನಿಕಾಂತ್‌ ಘೋಷಿಸಿದ್ದಾರೆ. ಪಕ್ಷದ ಹೆಸರು ಹಾಗೂ ಗುರುತು ಇನ್ನಷ್ಟೇ ಬಹಿರಂಗವಾಗಬೇಕಿದೆ. ರಜನಿಕಾಂತ್‌ ತಮಿಳುನಾಡು ವಿಧಾನಸಭೆಯ ಎಲ್ಲ 234 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಮಲ್‌ ಹಾಸನ್‌ ಅವರ ಪಕ್ಷವು ಮೊದಲ ಚುನಾವಣೆ ಎದುರಿಸಿತ್ತು. ತಮಿಳುನಾಡಿನ 38 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ 'ಎಂಎನ್‌ಎಂ ಒಂದೂ ಸ್ಥಾನದಲ್ಲಿ ಗೆಲುವು ಪಡೆದಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.