ADVERTISEMENT

ಕಮಲ್ ಪಕ್ಷ ತೊರೆದು ಡಿಎಂಕೆ ಸೇರಿದ ಕೊಂಗು ಪ್ರಾಂತ್ಯದ ಪ್ರಭಾವಿ ನಾಯಕ

ಪಿಟಿಐ
Published 9 ಜುಲೈ 2021, 5:16 IST
Last Updated 9 ಜುಲೈ 2021, 5:16 IST
ಆರ್. ಮಹೇಂದ್ರನ್ (ಚಿತ್ರ ಕೃಪೆ: Twitter Photo/@drmahendran_r)
ಆರ್. ಮಹೇಂದ್ರನ್ (ಚಿತ್ರ ಕೃಪೆ: Twitter Photo/@drmahendran_r)   

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಸೋಲಿನ ಬೆನ್ನಲ್ಲೇ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀದಿ ಮಯ್ಯಂ (ಎಂಎನ್‌ಎಂ) ಪಕ್ಷವನ್ನು ತೊರೆದಿರುವಕೊಂಗು ಪ್ರಾಂತ್ಯದ ಪ್ರಭಾವಿ ನಾಯಕಆರ್. ಮಹೇಂದ್ರನ್, ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಉಪಸ್ಥಿತಿಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷಕ್ಕೆ ಸೇರ್ಪಡೆಯಾದರು.

ಎಂಎನ್‌ಎಂ ಪಕ್ಷದ ಮಾಜಿ ಉಪಾಧ್ಯಕ್ಷ ಕೊಯಮತ್ತೂರು ಮೂಲದ ರಾಜಕಾರಣಿ, ಉದ್ಯಮಿ ಮಹೇಂದ್ರನ್, 200ಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಡಿಎಂಕೆಗೆ ಪಕ್ಷಾಂತರಗೊಂಡಿದ್ದಾರೆ.

ಈ ಕುರಿತು ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸ್ಟಾಲಿನ್, ಚುನಾವಣಾ ಆಯೋಗವು ಮತದಾನ ಘೋಷಿಸಿದಾಗಲೇ ಮಹೇಂದ್ರನ್ ಪಕ್ಷವನ್ನುಸೇರುವ ನಿರೀಕ್ಷೆಯಿತ್ತು. ಏಪ್ರಿಲ್ 6ಕ್ಕಿಂತ ಮುಂಚಿತವಾಗಿ ಸೇರ್ಪಡೆಯಾಗಿದ್ದರೆ 'ಕೊಂಗು' ಪ್ರದೇಶದಲ್ಲಿ ಮತ್ತಷ್ಟು ಸ್ಥಾನ ಗಳಿಸಲು ಸಾಧ್ಯವಾಗುತ್ತಿತ್ತು ಎಂದಿದ್ದಾರೆ.

ಚುನಾವಣೆಯಲ್ಲಿ ಡಿಎಂಕೆ ಗೆದ್ದರೂ ಕೊಯಮತ್ತೂರು ಹಾಗೂ ಸೇಲಂ ಸೇರಿದ ಕೊಂಗು ಪ್ರದೇಶದಲ್ಲಿ ಪಕ್ಷವು ನಿರೀಕ್ಷಿತ ಮಟ್ಟದ ಮುನ್ನಡೆ ದಾಖಲಿಸಲಿಲ್ಲ. ಆದರೆ ಈಗ ಈ ಸವಾಲನ್ನು ಮಹೇಂದ್ರನ್ ಸ್ವೀಕರಿಸಲಿದ್ದು, ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ನೆರವಾಗಲಿದ್ದಾರೆ ಎಂದು ಹೇಳಿದರು.

ಎಂಎನ್‌ಎಂ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವದ ಕೊರತೆಯಿದೆ ಎಂದು ಮಹೇಂದ್ರನ್ ಆರೋಪಿಸಿದ್ದಾರೆ. ಆದರೆ ಇನ್ನೇನು ಪಕ್ಷದಿಂದ ಉಚ್ಚಾಟಿಸುವ ವೇಳೆಗೆ ಮಹೇಂದ್ರನ್ ಪಕ್ಷವನ್ನು ತೊರೆದಿದ್ದಾರೆ ಎಂದು ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.