ಚೆನ್ನೈ: ಲೋಕಸಭೆ ಚುನಾವಣೆಯಲ್ಲಿನಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಲಭಿಸಿದರೆ ಹಾಗೂ ವಿಧಾನಸಭೆ ಉಪಚುನಾವಣೆಯಲ್ಲಿ ಜಯಗಳಿಸಿದರೆ ಭ್ರಷ್ಟಾಚಾರ ರಹಿತ ಆಡಳಿತ, ಎಲ್ಲ ಮನೆಗಳಿಗೂ ಕುಡಿಯುವ ನೀರು ಪೂರೈಕೆ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು ಎಂದು‘ಮಕ್ಕಳ್ ನೀದಿ ಮೈಯಂ’(ಎಂಎನ್‌ಎಸ್) ಪಕ್ಷದ ಸ್ಥಾಪಕಕಮಲ್ ಹಾಸನ್ ಭರವಸೆ ನೀಡಿದ್ದಾರೆ.
ಚೆನ್ನೈ ದಕ್ಷಿಣ ಕ್ಷೇತ್ರ ಅಭ್ಯರ್ಥಿ ರಂಗರಾಜನ್ ಪರವಾಗಿ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ ಅವರು, ‘ಇವರು(ರಂಗರಾಜನ್) ಏನು ಹೇಳುತ್ತಾರೋ ಅದನ್ನು ಮಾಡುತ್ತಾರೆ. ಒಂದು ವೇಳೆ ಎಂಎನ್‌ಎಸ್ ಜಯಗಳಿಸಿದರೆ, ಐದು ವರ್ಷಗಳ ವರೆಗೆ ಉಚಿತವಾಗಿಕುಡಿಯುವ ನೀರು ಹರಿಸಲಾಗುವುದು. ಯುವಕರು ಉದ್ಯೋಗ ಗಿಟ್ಟಿಸಿಕೊಳ್ಳುವಿರಿ. ಪ್ರವಾಹ ಸಂದರ್ಭಗಳಲ್ಲಿ ಜಲಸಂಪನ್ಮೂಲವು ವ್ಯರ್ಥವಾಗದಂತೆ ಸಂರಕ್ಷಿಸಲಾಗುವುದು’ ಎಂದು ಹೇಳಿದರು.
‘ನಮ್ಮ ಅಭ್ಯರ್ಥಿ ರಂಗರಾಜನ್ ಅವರು ಈಗಾಗಲೇ ಬೇರೆ ರಾಜ್ಯಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಎಂಎನ್‌ಎಸ್ ಅಭ್ಯರ್ಥಿ ಸುಶಿಕ್ಷಿತರು ಎಂಬುದು ನಿಮಗೆ ಗೊತ್ತು. ನಾನೇಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದು ನಿಮಗೆ ಈಗ ಗೊತ್ತಾಗಿರಬೇಕು; ನಾನು ನನ್ನ ಪಕ್ಷದ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದೇನೆ. ಹೆಚ್ಚೂ ಕಡಿಮೆ 50 ವರ್ಷಗಳ ಬಳಿಕ ಈ ಚುನಾವಣೆ ನಂತರ ತಮಿಳರ ಧ್ವನಿ ಲೋಕಸಭೆಯಲ್ಲಿ ಖಂಡಿತಕೇಳಲಿದೆ’ ಎಂದರು. ಬದಲಾವಣೆಗಾಗಿ ಮತ ನೀಡಿ ಎಂದೂ ಕೋರಿದರು.
ಕಮಲ್ ಹಾಸನ್ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ ಸಣ್ಣ ಪಕ್ಷಗಳ ಬೆಂಬಲ ಪಡೆದು ಲೋಕಸಭೆಯ 40 ಹಾಗೂ ಉಪಚುನಾವಣೆ ನಡೆಯಲಿರುವ 18 ವಿಧಾನಸಭೆ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಲಿದ್ದು, ಮೇ 23ರಂದು ಮತ ಎಣಿಕೆ ಆಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.