ನವದೆಹಲಿ: ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡೆಸಿದ ಉಪವಾಸ ಸತ್ಯಾಗ್ರಹದಿಂದಾಗಿ ಪಕ್ಷದ ರಾಜಸ್ಥಾನ ಘಟಕದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಬಗೆಹರಿಸುವ ಹೊಣೆಯನ್ನು ಹಿರಿಯ ನಾಯಕ ಕಮಲ್ ನಾಥ್ ಅವರಿಗೆ ಕಾಂಗ್ರೆಸ್ ವಹಿಸಿದೆ.
ಕಮಲ್‌ನಾಥ್ ಅವರನ್ನು ಕಾಂಗ್ರೆಸ್‌ನಲ್ಲಿ ‘ಟ್ರಬಲ್‌ಶೂಟರ್’ ಎಂದೇ ಪರಿಗಣಿಸಲಾಗುತ್ತದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಪೈಲಟ್ ಅವರನ್ನು ಗುರುವಾರ ಭೇಟಿ ಮಾಡಿ, ಚರ್ಚಿಸಿದ್ದಾರೆ.
‘ಹಿಂದಿನ ಬಿಜೆಪಿ ಸರ್ಕಾರದ ವೇಳೆ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಿರಶನ ನಡೆಸಿದ್ದೆ. ಅಷ್ಟೇ ನನ್ನ ಬೇಡಿಕೆಯಾಗಿತ್ತು. ಅದು ಪಕ್ಷದ ವಿರುದ್ಧ ನಡೆಸಿದ ಸತ್ಯಾಗ್ರಹವಲ್ಲ ಎಂಬುದಾಗಿ ಪೈಲಟ್ ಅವರು ಉಭಯ ನಾಯಕರಿಗೆ ಸ್ಪಷ್ಟಪಡಿಸಿದರು’ ಎಂದು ಮೂಲಗಳು ಹೇಳಿವೆ.
‘ಕಮಲ್ ನಾಥ್ ಹಾಗೂ ಪೈಲಟ್ ಅವರ ನಡುವಿನ ಸೌಹಾರ್ದದ ಸಭೆ ಇದಾಗಿತ್ತು. ಯಾವುದೇ ನಿರ್ದಿಷ್ಟ ಫಲಿತಾಂಶ ಹೊರಹೊಮ್ಮಿಲ್ಲ’ ಎಂದು ಇವೇ ಮೂಲಗಳು ಹೇಳಿವೆ.
ವಸುಂಧರರಾಜೆ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಪೈಲಟ್ ಅವರು ಮಂಗಳವಾರ ಜೈಪುರದಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.
ಪಕ್ಷದ ರಾಜ್ಯ ಘಟಕದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಎಐಸಿಸಿಯ ರಾಜಸ್ಥಾನ ಉಸ್ತುವಾರಿ ಸುಖ್ಜಿಂದರ್ ಸಿಂಗ್ ರಂಧಾವ ಅವರು ಗುರುವಾರವಷ್ಟೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ರಾಹುಲ್ ಗಾಂಧಿ ಅವರನ್ನೂ ಭೇಟಿ ಮಾಡಿದ್ದರು.
ಪೈಲಟ್ ಬಣದ ವಾದ: ಭ್ರಷ್ಟಾಚಾರ ವಿಷಯ ಮುಂದಿಟ್ಟುಕೊಂಡು ಸತ್ಯಾಗ್ರಹ ಕೈಗೊಂಡಿದ್ದ ಪೈಲಟ್ ಅವರ ನಡೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಅವರ ಬೆಂಬಲಿಗರು, ಪೈಲಟ್ ಅವರ ಹೋರಾಟಕ್ಕೆ ಪಕ್ಷ ವಿರೋಧಿ ಹಣೆಪಟ್ಟಿ ಕಟ್ಟಬಾರದು ಎನ್ನುತ್ತಾರೆ.
‘ಅದಾನಿ ಸಮೂಹದ ವಿರುದ್ಧದ ಆರೋಪಗಳನ್ನು ಉಲ್ಲೇಖಿಸುತ್ತಿರುವ ಪಕ್ಷವು, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭ್ರಷ್ಟಾಚಾರ ವಿಷಯವನ್ನೇ ಒಂದು ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ. ಪೈಲಟ್ ಕೂಡ ಭ್ರಷ್ಟಾಚಾರದ ವಿರುದ್ಧ ಹೋರಾಟ ಕೈಗೊಂಡಿದ್ದಾರೆ’ ಎಂದೂ ಅವರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.