ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ದಟ್ಟವಾಗಿರುವ ಬೆನ್ನಲ್ಲೇ, ಅವರ ಪುತ್ರ ನಕುಲನಾಥ್ ಅವರು ತಮ್ಮ ಸಾಮಾಜಿಕ ಜಾಲತಾಣಗಳ ವಿವರಣೆಯಲ್ಲಿ ‘ಕಾಂಗ್ರೆಸ್’ ಹೆಸರನ್ನು ಕೈಬಿಟ್ಟಿರುವುದು ಊಹಾಪೋಹಕ್ಕೆ ರೆಕ್ಕೆ ಬಂದಂತಾಗಿದೆ.
ಕಳೆದ ಕೆಲ ದಿನಗಳಿಂದ ಕಮಲನಾಥ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಾರೆ ಎಂಬ ವದಂತಿ ಎಲ್ಲೆಡೆ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಶನಿವಾರ ಸಂಜೆ ಅವರು ನವದೆಹಲಿಗೆ ಬಂದಿಳಿದಿದ್ದು, ಬಿಜೆಪಿಯ ಹಿರಿಯ ಮುಖಂಡರೊಂದಿಗೆ ಚರ್ಚಿಸಲಿದ್ದಾರೆ ಎಂದು ಪಕ್ಷಗಳ ಮೂಲಗಳು ಹೇಳಿವೆ.
ಈ ನಡುವೆ ಛಿಂದ್ವಾರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಕುಲ್ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ದಟ್ಟವಾಗಿವೆ.
ವದಂತಿಗಳ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಕಮಲನಾಥ್, ‘ಹಾಗೊಂದು ವಿಷಯ ಇದ್ದಲ್ಲಿ ಮೊದಲು ನಿಮಗೇ ಹೇಳುತ್ತೇನೆ. ಇದು ತಳ್ಳಿಹಾಕುವ ವಿಷಯವೂ ಅಲ್ಲ. ನೀವೆಲ್ಲ ಹೇಳುತ್ತೀದ್ದೀರಾ ಎಂದರೆ ಎಲ್ಲರೂ ಕುತೂಹಲದಿಂದ ಇದ್ದೀರಾ ಎಂದೇ ಅರ್ಥ. ಇಲ್ಲಿಯೋ ಅಥವಾ ಅಲ್ಲಿಯೋ ಎಂಬುದರ ಬಗ್ಗೆ ನನಗೇನೂ ಅಂಥ ಕುತೂಹಲವಿಲ್ಲ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್‌ನಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದ್ದು, ವಾರದ ಹಿಂದೆ ಮಾಜಿ ಶಾಸಕ ದಿನೇಶ ಅಹಿರ್ವಾರ್ ಅವರು ಬಿಜೆಪಿ ಸೇರಿದರು.
ಬಿಜೆಪಿಯ ಮಧ್ಯಪ್ರದೇಶದ ಅಧ್ಯಕ್ಷ ವಿ.ಡಿ.ಶರ್ಮಾ ಅವರು ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯಿಸಿ, ‘ಅಯೋಧ್ಯೆಯ ಬಾಲರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್‌ನ ನಡೆಯಿಂದ ಬೇಸರಗೊಂಡಿರುವ ಆ ಪಕ್ಷದ ಹಿರಿಯ ನಾಯಕರಿಗೆ ಬಿಜೆಪಿಯ ಬಾಗಿಲು ತೆರೆದಿದೆ’ ಎಂದಿದ್ದರು.
ಛಿಂದ್ವಾರಾ ಕ್ಷೇತ್ರದ ಸಂಸದ ನಕುಲ ನಾಥ್ ಅವರು ಈ ಬಾರಿಯೂ ಅದೇ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಂಗಳ ಹಿಂದೆ ಹೇಳಿದ್ದರು. 2019ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಕಮಲನಾಥ್ ಅವರು ಬಿಜೆಪಿ ಸೇರ್ಪಡೆ ಕುರಿತು ಎದ್ದಿರುವ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಕಾಂಗ್ರೆಸ್ ಮುಖಂಡ ಜಿತು ಪಟ್ವಾರಿ, ‘ಇಂದಿರಾಗಾಂಧಿ ಅವರ ‘ಮೂರನೇ ಪುತ್ರ’ ಕಾಂಗ್ರೆಸ್ ತೊರೆಯುವರೇ?’ ಎಂದು ಪ್ರಶ್ನಿಸಿದ್ದಾರೆ.
ಇಂದಿರಾ ಗಾಂಧಿ ಅವರೇ ಕಮಲನಾಥ್ ನನ್ನ ‘ಮೂರನೇ ಮಗ’ ಇದ್ದಂತೆ ಎಂದು ಹೇಳಿದ್ದರು. ದಿಗ್ವಿಜಯ ಸಿಂಗ್ ಕೂಡಾ ಕಮಲನಾಥ್ ಅವರ ನಡೆಯನ್ನು ‘ಮಾಧ್ಯಮಗಳ ಸೃಷ್ಟಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.