ADVERTISEMENT

ಕಮಲೇಶ್ ತಿವಾರಿ ಹತ್ಯೆ ಪ್ರಕರಣ: ಸೂರತ್‌ನ ಮೂವರ ಬಂಧನ

ಏಜೆನ್ಸೀಸ್
Published 19 ಅಕ್ಟೋಬರ್ 2019, 8:42 IST
Last Updated 19 ಅಕ್ಟೋಬರ್ 2019, 8:42 IST
ಕಮಲೇಶ್ ತಿವಾರಿ
ಕಮಲೇಶ್ ತಿವಾರಿ   

ಲಖನೌ:ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್‌ಎಂ) ಅಧ್ಯಕ್ಷ ಕಮಲೇಶ್ ತಿವಾರಿ ಹತ್ಯೆ ಪ‍್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಪೊಲೀಸರು ಶನಿವಾರ ಸೂರತ್‌ನಿಂದ ಮೂವರನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸೂರತ್‌ನಿಂದ ನಾಲ್ವರು ಮತ್ತು ಅಹ್ಮದಾಬಾದ್‌ನಿಂದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಪೈಕಿ, ಮೌಲಾನಾ ಮೊಹ್ಸಿನ್ ಶೇಖ್, ಫೈಜಾನ್ ಮತ್ತು ಖುರ್ಷಿದ್ ಅಹ್ಮದ್ ಪಠಾಣ್ ಎಂಬುವವರನ್ನು ಬಂಧಿಸಲಾಗಿದೆ.

ತಿವಾರಿ ಹತ್ಯೆಯಾದ ಪ್ರದೇಶದಲ್ಲಿ ಪೊಲೀಸರಿಗೆ ಸಿಕ್ಕಿದ್ದ ಸಿಹಿತಿಂಡಿ ಬಾಕ್ಸ್‌ನಲ್ಲಿ ಸೂರತ್‌ನ ವಿಳಾಸವಿತ್ತು.ಸಿಹಿತಿಂಡಿ ಪೊಟ್ಟಣವನ್ನು ಸೂರತ್‌ನ ನವ್‌ಸಾರಿ ಬಜಾರ್‌ನಲ್ಲಿರುವ ಧರ್ತಿ ಫರ್‌ಸನ್‌ ಅಂಗಡಿಯಿಂದ ಖರೀದಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಅಂಗಡಿಯ ಮಾಲೀಕನನ್ನು ವಿಚಾರಣೆಗೆ ಒಳಪಡಿಸಿದ್ದ ಸೂರತ್ ಕ್ರೈಂಬ್ರಾಂಚ್ ಪೊಲೀಸರು ಶಂಕಿತರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.

ಅಂಗಡಿಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಯನ್ನೂ ಕಲೆಹಾಕಿರುವ ಪೊಲೀಸರು ಅದನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ. ಕೆಲವು ಶಂಕಿತ ಯುವಕರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

ಕಮಲೇಶ್ ತಿವಾರಿ ಅವರನ್ನು ಶುಕ್ರವಾರ ಹತ್ಯೆ ಮಾಡಲಾಗಿತ್ತು.ಮನೆಯೊಳಗೆ ಕತ್ತು ಸೀಳಿದ ಸ್ಥಿತಿಯಲ್ಲಿ ತಿವಾರಿ ಮೃತದೇಹ ಪತ್ತೆಯಾಗಿತ್ತು. ಮನೆಗೆ ಬಂದಿದ್ದ ಮೂವರು ವ್ಯಕ್ತಿಗಳೇ ಅವರ ಹತ್ಯೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಆ ವ್ಯಕ್ತಿಗಳು ತಂದಿದ್ದಸಿಹಿತಿಂಡಿ ಬಾಕ್ಸ್‌ನಲ್ಲೇ ಹತ್ಯೆಗೆ ಬಳಸಿದ ಆಯುಧವನ್ನೂ ತರಲಾಗಿತ್ತು ಎನ್ನಲಾಗಿದೆ.ಅಯೋಧ್ಯೆ ಪ್ರಕರಣದಲ್ಲಿ ತಿವಾರಿ ಕೂಡಾ ಕಕ್ಷಿದಾರರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.