ಲಖನೌ: ಶುಕ್ರವಾರ ಹತ್ಯೆಗೀಡಾದ ಅಖಿಲ ಭಾರತ ಹಿಂದೂ ಮಹಾಸಭಾಅಧ್ಯಕ್ಷ ಕಮಲೇಶ್ ತಿವಾರಿಯ ಪ್ರತಿಮೆ ಸ್ಥಾಪಿಸಬೇಕು ಎಂದು ತಿವಾರಿ ಕುಟುಂಬ ಆಗ್ರಹಿಸಿದೆ. ಭಾನುವಾರ ಉತ್ತರಪ್ರದೇಶದಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ನಿವಾದಲ್ಲಿ ಅವರನ್ನುಭೇಟಿ ಮಾಡಿದ ಕುಟುಂಬ ಲಖನೌಗ ಕುರ್ಶೆದ್‌ಭಾಗ್‌ನಲ್ಲಿ ಪ್ರತಿಮೆ ಸ್ಥಾಪಿಸಿ ಅಲ್ಲಿನ ರಸ್ತೆಗೂ ಕಮಲೇಶ್ ತಿವಾರಿ ಹೆಸರಿಡಬೇಕು ಎಂದು ಒತ್ತಾಯಿಸಿದೆ.
ಅದೇ ವೇಳೆ ಈ ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್‌ಎಂ) ನಾಯಕರು ಹೇಳಿದ್ದಾರೆ. ತಿವಾರಿಗೆ ಜೀವ ಬೆದರಿಕೆ ಇದ್ದರೂ ಅವರಿಗೆ ರಕ್ಷಣೆ ನೀಡಲು ಸರ್ಕಾರ ವಿಫಲವಾಗಿದೆ ಎಂದು ನಾಯಕರು ಆರೋಪಿಸಿದ್ದಾರೆ.
ಹತ್ಯೆ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಬೇಕು ಎಂದು ತಿವಾರಿ ಪುತ್ರ ಒತ್ತಾಯಿಸಿದ್ದಾರೆ. ಆದಿತ್ಯನಾಥ ಅವರು ತಿವಾರಿ ಕುಟುಂಬವನ್ನು ಭೇಟಿ ಮಾಡುವಲ್ಲಿವರೆಗೆ ತಿವಾರಿ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಕುಟುಂಬ ಪಟ್ಟು ಹಿಡಿದಿತ್ತು. ಏತನ್ಮಧ್ಯೆ ತನ್ನ ಮಗನ ಹತ್ಯೆಯಲ್ಲಿ ಬಿಜೆಪಿ ನೇತಾರರ ಕೈವಾಡ ಇದೆ ಎಂದು ತಿವಾರಿಯ ಅಮ್ಮ ಕುಸುಮ್ ಆರೋಪಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರ ಮುಗಿಸಿ ಆದಿತ್ಯನಾಥರು ಭಾನುವಾರ ಲಖನೌಗೆ ತಲುಪಿದ್ದರು.
ತಿವಾರಿ ಅವರ ಹಂತಕರನ್ನು ಆದಷ್ಟು ಬೇಗ ಸೆರೆ ಹಿಡಿಯಲಾಗುವುದು ಎಂದು ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿಯೇ ಆದಿತ್ಯನಾಥ ಭರವಸೆ ನೀಡಿದ್ದರು.
ಹಂತಕರನ್ನು ಬಂಧಿಸದಿದ್ದರೆ ಕಿಚ್ಚಿಟ್ಟು ಆತ್ಮಹತ್ಯೆ ಮಾಡುವುದಾಗಿ ತಿವಾರಿ ಪತ್ನಿ ಬೆದರಿಕೆಯೊಡ್ಡಿದ್ದರು.
ತಿವಾರಿ ಕುಟುಂಬಕ್ಕೆ ಆದಿತ್ಯನಾಥ ಸರ್ಕಾರ ಭದ್ರತೆ ಒದಗಿಸಿದ್ದು, ಪರಿಹಾರ ಧನ, ಮನೆ ಮತ್ತು ಪುತ್ರನಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.