ನವದೆಹಲಿ: ಹಲವರ ಸಾವಿಗೆ ಕಾರಣವಾಗಿರುವ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲು ನಡುವಿನ ಅಪಘಾತದಲ್ಲಿ ಕೆಂಪು ಸಿಗ್ನಲ್ ದೀಪವನ್ನು ದಾಟಲು ಸ್ಟೇಷನ್ ಮಾಸ್ಟರ್ ಅನುಮತಿ ನೀಡಿದ್ದರು ಎಂಬ ಅಂಶ ಆಂತರಿಕ ದಾಖಲೆಗಳಿಂದ ತಿಳಿದುಬಂದಿರುವುದಾಗಿ ವರದಿಯಾಗಿದೆ.
ಕೆಂಪು ದೀಪವನ್ನು ದಾಟಲು ಲೋಕೊಪೈಲೆಟ್‌ಗೆ ರಾಣಿಪತ್ರಾ ಸ್ಟೇಷನ್ ಮಾಸ್ಟರ್ ಅನುಮತಿಸಿದ್ದಾರೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.
‘ಸ್ವಯಂ ಚಾಲಿತ ಸಿಗ್ನಲ್ ವ್ಯವಸ್ಥೆ ವಿಫಲಗೊಂಡಿದೆ. ಹೀಗಾಗಿ ರಾಣಿಪತ್ರಾ ರೈಲ್ವೆ ನಿಲ್ದಾಣದಿಂದ ಚತ್ರಹಾಟ್ ಜಂಕ್ಷನ್‌ವರೆಗೆ ಎಲ್ಲೆಲ್ಲಿ ಇಂಥ ಸ್ವಯಂ ಚಾಲಿತ ಸಿಗ್ನಲ್ ಇವೆಯೋ, ಅವುಗಳನ್ನು ದಾಟಬಹುದು ಎಂದು ಅನುಮತಿಸಲಾಗಿತ್ತು. ಈ ಎರಡು ಜಂಕ್ಷನ್‌ಗಳ ನಡುವೆ ಒಟ್ಟು 9 ಸಿಗ್ನಲ್‌ಗಳಿವೆ. ಈ ಎಲ್ಲಾ ಸಿಗ್ನಲ್‌ಗಳಲ್ಲಿ ಕೆಂಪು, ಹಳದಿ ಅಥವಾ 2 ಹಳದಿ ದೀಪಗಳು ಇದ್ದರೂ ವೇಗವಾಗಿಯೇ ದಾಟಲು ಅನುಮತಿಸಲಾಗಿತ್ತು’ ಎಂದೆನ್ನಲಾಗಿದೆ.
ಯಾವುದೇ ಮಾರ್ಗದಲ್ಲಿ ಯಾವ ರೀತಿಯ ತಡೆಯೂ ಇಲ್ಲದಿದ್ದಲ್ಲಿ ರೈಲುಗಳಿಗೆ ಟಿಎ 912 ನೀಡಲಾಗುತ್ತದೆ. ಇದರಿಂದ ಯಾವ ಬಣ್ಣದ ಸಿಗ್ನಲ್ ದೀಪವಿದ್ದರೂ, ಅದನ್ನು ದಾಟಲು ಅನುಮತಿ ಸಿಕ್ಕಂತೆ. ಆದರೆ, ಸ್ಟೇಷನ್ ಮಾಸ್ಟರ್ ಇದನ್ನು ಹೇಗೆ ನೀಡಿದರು ಎಂಬುದರ ಕುರಿತು ತನಿಖೆಯಾಗಬೇಕು. ಈ ನಿಲ್ದಾಣದಿಂದ ಗೂಡ್ಸ್ ರೈಲಿಗಿಂತ ಹಿಂದೆ ಹೋಗಿದ್ದ ರೈಲು ಮುಂದಿನ ಸ್ಟೇಷನ್ ದಾಟಿದೆ ಎಂದು ಭಾವಿಸಿ ನೀಡಿದರೇ ಎಂಬುದೂ ತನಿಖೆಯಿಂದ ತಿಳಿಯಬೇಕಿದೆ’ ಎಂದು ಮೂಲಗಳು ಹೇಳಿವೆ.
ಈ ಎರಡು ನಿಲ್ದಾಣಗಳ ನಡುವೆ ಸೋಮವಾರ ಬೆಳಿಗ್ಗೆ 5.50ರಿಂದ ಸಿಗ್ನಲ್ ದೀಪದಲ್ಲಿ ಸಮಸ್ಯೆ ಇತ್ತು. ಇದರ ಮಾಹಿತಿ ಇಲ್ಲದ ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲು ಎಲ್ಲಾ ಸಿಗ್ನಲ್ ದೀಪದಲ್ಲೂ ನಿಲ್ಲಿಸಿಕೊಂಡು ಹೋಗಿದೆ. 8.37ಕ್ಕೆ ಹೊರಟ ರೈಲಿಗೆ ಟಿಎ 912 ನೀಡಲಾಗಿತ್ತು. 8.42ಕ್ಕೆ ರಂಗಾಪಾನಿಯಿಂದ ಹೊರಟ ಗೂಡ್ಸ್ ರೈಲು ಕಾಂಚನ್‌ಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ ರೈಲು ಹಳಿ ತಪ್ಪಿದೆ.
ಸಿಗ್ನಲ್ ದೀಪವನ್ನು ಪಾಲಿಸದಿರುವುದೇ ಈ ಅಪಘಾತಕ್ಕೆ ಕಾರಣ ಎಂದು ರೈಲ್ವೆ ಮಂಡಳಿ ಈ ಮೊದಲು ಹೇಳಿತ್ತು.
‘ಅಪಘಾದಲ್ಲಿ ಒಟ್ಟು 9 ಜನ ಮೃತಪಟ್ಟು, ಮಕ್ಕಳು ಸೇರಿದಂತೆ 41 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ರೈಲ್ವೆ ಸಚಿವಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.