ಮುಂಬೈ: ಪರಿಷ್ಕರಣಾ ಸಮಿತಿ ಶಿಫಾರಸು ಮಾಡಿದಂತೆ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಕೆಲ ಭಾಗಗಳನ್ನು ಕಡಿತ ಮಾಡಲು ನಟಿ ಕಂಗನಾ ರನೌತ್ ಒಪ್ಪಿಗೆ ನೀಡಿದ್ದಾರೆ ಎಂದು ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಸೋಮವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಾಬಾ ವಾಲಾ ಮತ್ತು ಫಿರ್ದೋಷ್ ಪೂನಿವಾಲಾ ಅವರಿದ್ದ ವಿಭಾಗೀಯ ಪೀಠವು ಸಿನಿಮಾಗೆ ಪ್ರಮಾಣಪತ್ರ ನೀಡಲು ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ ನಿರ್ದೇಶನ ನೀಡುವಂತೆ ಈ ಸಿನಿಮಾದ ಸಹ ನಿರ್ಮಾಪಕ ಸಂಸ್ಥೆಯಾದ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದೆ.
ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಪರ ವಾದ ಮಂಡಿಸಿದ ವಕೀಲ ಶರಣ್ ಜಗ್ತಿಯಾನಿ ಅವರು ಸಿಬಿಎಫ್‌ಸಿ ಪರಿಷ್ಕರಣಾ ಸಮಿತಿ ಶಿಫಾರಸು ಮಾಡಿದಂತೆ ಸಿನಿಮಾದಲ್ಲಿ ಕೆಲ ಭಾಗಗಳನ್ನು ಕಡಿತ ಮಾಡುವ ಬಗ್ಗೆ ಕಂಗನಾ ರನೌತ್ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಸಿಬಿಎಫ್‌ಸಿ ಹೇಳಿರುವ ಬದಲಾವಣೆಗಳು ಸಿನಿಮಾದ ಒಟ್ಟು ಅವಧಿಯನ್ನು ಒಂದು ನಿಮಿಷ ಕೂಡ ಕಡಿಮೆ ಮಾಡುವುದಿಲ್ಲ ಎಂದು ಮಂಡಳಿ ಪರ ವಕೀಲ ಅಭಿನವ್ ಚಂದ್ರಚೂಡ್ ಅವರು ಪೀಠಕ್ಕೆ ತಿಳಿಸಿದರು. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಲಾಗಿದೆ.
ನಟಿ ಕಂಗನಾ ರನೌತ್ ಈ ಸಿನಿಮಾದಲ್ಲಿ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಈ ಸಿನಿಮಾದ ನಿರ್ದೇಶನವನ್ನೂ ಮಾಡಿದ್ದಾರೆ. ಸೆಪ್ಟೆಂಬರ್ 6ರಂದು ತೆರೆ ಕಾಣಬೇಕಿದ್ದ ಸಿನಿಮಾ, ಪ್ರಮಾಣಪತ್ರ ಸಿಗದ ಕಾರಣ ಮಂಡಳಿಯೊಂದಿಗೆ ಕಾನೂನು ಹೋರಾಟ ನಡೆಸುತ್ತಿದೆ.
ಈ ಸಿನಿಮಾದಲ್ಲಿ ಸಿಖ್ ಸಮುದಾಯವನ್ನು ತಪ್ಪಾಗಿ ನಿರೂಪಿಸಲಾಗಿದ್ದು, ಐತಿಹಾಸಿಕ ಸಂಗತಿಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಶಿರೋಮಣಿ ಅಕಾಲಿ ದಳ ಸೇರಿದಂತೆ ಕೆಲ ಸಿಖ್ ಸಂಘಟನೆಗಳು ಸಿನಿಮಾ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿವೆ.
ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡುವ ಕುರಿತು ನಿರ್ಧಾರ ತೆಗೆದುಕೊಳ್ಳದ ಮಂಡಳಿಯನ್ನು ಕಳೆದ ವಾರ ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಾಬಾ ವಾಲಾ ಮತ್ತು ಫಿರ್ದೋಷ್ ಪೂನಿವಾಲಾ ಅವರಿದ್ದ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.