ADVERTISEMENT

ಕಂಗನಾ ಮುಖಕ್ಕೆ ಗುದ್ದಿದ CISF ಯೋಧೆಗೆ ಭಾರಿ ಬೆಂಬಲ

ತಾಯಿಗಾಗಿ ಇಂಥ ಸಾವಿರ ಕೆಲಸ ಕಳೆದುಕೊಳ್ಳಲು ಸಿದ್ಧ: ಕುಲ್ವಿಂದರ್ ಕೌರ್

ಪಿಟಿಐ
Published 7 ಜೂನ್ 2024, 16:18 IST
Last Updated 7 ಜೂನ್ 2024, 16:18 IST
ಕಂಗನಾ ರನೌತ್
ಕಂಗನಾ ರನೌತ್   

ಚಂಡೀಗಢ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರನೌತ್‌ ಮುಖಕ್ಕೆ ಗುದ್ದಿದ ಕೇಂದ್ರೀಯ ಭದ್ರತಾ ಪಡೆಯ (ಸಿಐಎಸ್ಎಫ್) ಮಹಿಳಾ ಕಾನ್‌ಸ್ಟೆಬಲ್‌ ಕುಲ್ವಿಂದರ್ ಕೌರ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ. 

ಸೇವೆಯಿಂದ ಅಮಾನತುಗೊಂಡಿರುವ ಕುಲ್ವಿಂದರ್ ಪರ ಕೆಲವು ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಅಲ್ಲದೆ, ಈ ಘಟನೆಗೆ ಕಾರಣವೇನು ಎಂಬುದರ ಕುರಿತು ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿವೆ. 

ಪ್ರಮುಖವಾಗಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಸಂಘಟನೆಗಳು, ತಾವು ಸಿಐಎಸ್ಎಫ್ ಸಿಬ್ಬಂದಿ ಕುಲ್ವಿಂದರ್ ಕೌರ್ ಪರ ನಿಲ್ಲುವುದಾಗಿ ಘೋಷಿಸಿವೆ.  

ADVERTISEMENT

ರೈತರ ಪ್ರತಿಭಟನೆ ಕುರಿತಾಗಿ ಕಂಗನಾ ಅವರ ಹೇಳಿಕೆಯಿಂದ ಅಸಮಾಧಾನಗೊಂಡು ನಟಿಯ ಕಪಾಳಕ್ಕೆ ಹೊಡೆದಂತೆ ಕಂಡುಬರುತ್ತಿದೆ. ಈ ಸಂಬಂಧ ಮಹಿಳಾ ಸಿಬ್ಬಂದಿಯನ್ನು ಸಿಐಎಸ್ಎಫ್ ಅಮಾನತು ಮಾಡಲಾಗಿದ್ದು, ತನಿಖೆಗೆ ಆದೇಶಿಸಿದೆ. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಜಗಜಿತ್ ಸಿಂಗ್ ದಲ್ಲೇವಾಲ್ ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ್ವರಣ್ ಸಿಂಗ್ ಪಾಂಧೇರ್, ‘ಘಟನೆ ಕುರಿತು ಪಂಜಾಬ್ ಡಿಜಿಪಿ ಗೌರವ್ ಯಾದವ್ ಅವರನ್ನು ಭೇಟಿಯಾಗಿ, ಸರಿಯಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತೇವೆ. ಅಲ್ಲದೆ, ಮಹಿಳಾ ಕಾನ್‌ಸ್ಟೆಬಲ್‌ಗೆ ಅನ್ಯಾಯವಾಗಬಾರದು ಎಂದು ಅವರಿಗೆ ತಿಳಿಸುವೆ’ ಎಂದು ಹೇಳಿದರು. 

ಮಾರ್ಚ್ 9ರಂದು ಮೊಹಾಲಿಯಲ್ಲಿ ಸಿಐಎಸ್ಎಫ್ ಕಾನ್‌ಸ್ಟೆಬಲ್‌ ಪರ ‘ನ್ಯಾಯ ಯಾತ್ರೆ’ ನಡೆಸಲಾಗುವುದು ಎಂದರು.

ಮತ್ತೊಂದೆಡೆ ಸಿಐಎಸ್ಎಫ್ ಸಿಬ್ಬಂದಿ ಕೆಲಸ ಕಳೆದುಕೊಂಡಲ್ಲಿ, ಅವರ ಜೀವನೋಪಾಯಕ್ಕಾಗಿ ಕ್ರೌಡ್‌ಫಂಡಿಂಗ್ ಮೂಲಕ ಅವರಿಗೆ ನೆರವು ನೀಡಲಾಗುವುದು ಎಂದು ಕೆಲವು ಸಂಘಟನೆಗಳು ತಿಳಿಸಿವೆ. 

ರೈತ ವಿರೋಧಿ ಹೇಳಿಕೆಗಾಗಿ ಕಪಾಳಕ್ಕೆ ಗುದ್ದು: ನಟಿ ಕಂಗನಾ ಅವರಿಗೆ ಕಪಾಳಕ್ಕೆ ಹೊಡೆದ ಬಳಿಕ ಜನರೊಂದಿಗೆ ಮಹಿಳಾ ಕಾನ್‌ಸ್ಟೆಬಲ್ ಮಾತನಾಡಿದ್ದಾರೆ ಎಂಬಂತೆ ಇರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಕುಲ್ವಿಂದರ್ ಅವರಿಗೆ ತಾವು ಕೆಲಸ ಕೊಡಲು ಸಿದ್ಧ ಎಂದು ಸಂಗೀತ ನಿರ್ದೇಶಕ ಹಾಗೂ ಗಾಯಕ ವಿಶಾಲ್ ದದ್‌ಲಾನಿ ಹೇಳಿರುವ ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. 

ಒಂದು ವಿಡಿಯೊದಲ್ಲಿ ‘₹100 ಅಥವಾ ₹200 ಪಡೆದಿದ್ದರಿಂದಾಗಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಂಗನಾ ಅವರು ಹೇಳಿದ್ದರು. ರೈತರ ಆ ಪ್ರತಿಭಟನೆಯಲ್ಲಿ ನನ್ನ ತಾಯಿಯೂ ಪ್ರತಿಭಟನಕಾರರಲ್ಲಿ ಒಬ್ಬರಾಗಿದ್ದರು’ ಎಂದು ಮಹಿಳಾ ಕಾನ್‌ಸ್ಟೆಬಲ್ ಹೇಳಿದ್ದಾರೆ. 

ಸಾವಿರ ಕೆಲಸ ಕಳೆದುಕೊಳ್ಳಲು ಸಿದ್ಧ

‘ಕೆಲಸ ಕಳೆದುಕೊಂಡಿರುವ ಬಗ್ಗೆ ನನಗೆ ಯಾವುದೇ ಭಯವಿಲ್ಲ. ತಾಯಿಗೆ ಗೌರವ ಸಲ್ಲಿಸುವ ಭಾಗವಾಗಿ ಇಂಥ ಸಾವಿರ ಕೆಲಸ ಕಳೆದುಕೊಳ್ಳಲು ನಾನು ಸಿದ್ಧನಿದ್ದೇನೆ’ ಎಂದು ‘ಎಕ್ಸ್’ ಮೂಲಕ ಕುಲ್ವಿಂದರ್ ಕೌರ್ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.