ಚಂಡೀಗಢ: ಬಿಜೆಪಿ ಸಂಸದೆಯಾಗಿ ಚುನಾಯಿತರಾಗಿರುವ ಕಂಗನಾ ರನೌತ್ ಅವರ ಮುಖಕ್ಕೆ ಗುದ್ದಿದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಮಹಿಳಾ ಕಾನ್‌ಸ್ಟೇಬಲ್ ಬೆಂಬಲಕ್ಕೆ ಕೆಲವು ರೈತ ಸಂಘಟನೆಗಳು ನಿಂತಿವೆ. ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿವೆ.
ಮಹಿಳಾ ಕಾನ್‌ಸ್ಟೇಬಲ್ ಬೆಂಬಲಕ್ಕೆ ನಾವಿದ್ದೇವೆ ಎಂದು ರೈತ ಸಂಘಟನೆಗಳಾದ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ಹೇಳಿವೆ.
‘ಪಂಜಾಬ್ ಪೊಲೀಸ್ ಮಹಾನಿರ್ದೇಶಕರನ್ನು ಭೇಟಿ ಮಾಡಿ ಸರಿಯಾಗಿ ತನಿಖೆ ನಡೆಯಬೇಕು ಎಂದು ಆಗ್ರಹಿಸಲಾಗುವುದು. ಮಹಿಳಾ ಕಾನ್‌ಸ್ಟೇಬಲ್‌ಗೆ ಯಾವುದೇ ಅನ್ಯಾಯವಾಗಬಾರದು ಎಂದು ನಾವು ಒತ್ತಾಯಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಜಗದಿತ್ ಸಿಂಗ್ ದಲ್ಲೆವಾಲ್ ಹಾಗೂ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವನ್ ಸಿಂಗ್ ಪಂದೇರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
‘ಜೂನ್ 9ರಂದು ಮೊಹಾಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ‘ಇನ್ಸಾಫ್ ಮಾರ್ಚ್’ ಹಮ್ಮಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ಕಾನ್‌ಸ್ಟೇಬಲ್‌ಗೆ ಯಾವುದೇ ಅನ್ಯಾಯವಾಗಬಾರದು ಎಂದು ಒತ್ತಾಯಿಸಲಾಗುವುದು’ ಎಂದು ಪಂದೇರ್ ತಿಳಿಸಿದ್ದಾರೆ.
ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರನೌತ್ ಅವರಿಗೆ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಗುರುವಾರ ಮುಖಕ್ಕೆ ಗುದ್ದಿದ್ದರು. ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಎಂಬುವವರು ಕಂಗನಾ ಮೇಲೆ ಹಲ್ಲೆ ನಡೆಸಿದವರು. ಹಿಂದೆ ರೈತರ ಕುರಿತು ಅಗೌರವದಿಂದ ಮಾತನಾಡಿದ್ದರಿಂದ ಅಸಮಾಧಾನಗೊಂಡು ಹಲ್ಲೆ ನಡೆಸಿರುವುದಾಗಿ ಕೌರ್ ಹೇಳಿದ್ದರು.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಕಂಗನಾ ಗೆದ್ದಿದ್ದರು. ಚಂಡೀಗಢದಿಂದ ದೆಹಲಿಗೆ ಪ್ರಯಾಣಿಸಲು ಇವರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಭದ್ರತಾ ತಪಾಸಣೆ ವೇಳೆ, ಕೌರ್ ಅವರು ಕಂಗನಾಗೆ ಕಪಾಳಮೋಕ್ಷ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.